ದೇಶ

ಗಗನಕ್ಕೇರಿದ ಈರುಳ್ಳಿ ಬೆಲೆ: ಕೆಜಿಗೆ 165, ಜನವರಿ 20ರ ವೇಳೆಗೆ ಈರುಳ್ಳಿ ಆಮದು ಎಂದ ಸರ್ಕಾರ

Lingaraj Badiger

ನವದೆಹಲಿ: ದಿನೇ ದಿನೇ ಈರುಳ್ಳಿ ಬೆಲೆ ಗಗನಕ್ಕೇರುತ್ತಿದ್ದು, ರಾಷ್ಟ್ರ ರಾಜಧಾನಿ ದೆಹಲಿ, ಮುಂಬೈ, ಬೆಂಗಳೂರು ಹಾಗೂ ಚೆನ್ನೈ ಸೇರಿದಂತೆ ದೇಶದ ಹಲವು ಪ್ರಮುಖ ನಗರಗಳಲ್ಲಿ ಈರುಳ್ಳಿ ಬೆಲೆ ಶುಕ್ರವಾರ 165ರ ಗಡಿ ದಾಟಿದೆ.

ಈ ಮಧ್ಯೆ ಕೇಂದ್ರ ಸರ್ಕಾರ, ಜನವರಿ 20ರ ವೇಳೆ ಈರುಳ್ಳಿಯನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುವುದು ಎಂದು ಸಂಸತ್ತಿಗೆ ತಿಳಿಸಿದೆ.

ಇಂದು ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಈರುಳ್ಳಿ ಬೆಲೆ ಏರಿಕೆ ಬಗ್ಗೆ ಪ್ರತ್ರಿಯಿಸಿದ ಗ್ರಾಹಕ ವ್ಯಾವಹಾರಗಳ ಖಾತೆ ರಾಜ್ಯ ಸಚಿವ ದನ್ವೆ ರಾವ್ ಸಾಹೇಬ್ ದಾದಾರಾವ್ ಅವರು, ಈರುಳ್ಳಿ ಬೆಲೆ ಏರಿಕೆ ಬಗ್ಗೆ ಯಾವುದೇ ಅನುಮಾನ ಇಲ್ಲ. ಭಾರಿ ಮಳೆಯಿಂದಾಗಿ ಮಹಾರಾಷ್ಟ್ರದಲ್ಲಿ ಈರುಳ್ಳಿ ಬೆಳೆ ಹಾನಿಯಾಗಿದೆ. ಹೀಗಾಗಿ ಬೆಲೆ ಏರಿಕೆಯಾಗಿದೆ. ಸರ್ಕಾರ ವಿದೇಶದಿಂದ ಈರುಳ್ಳಿ ಆಮದು ಮಾಡಿಕೊಳ್ಳುತ್ತಿದ್ದು, ಜನವರಿ 20ರ ವೇಳೆಗೆ ಬರಲಿದೆ ಎಂದರು.

ಸರ್ಕಾರ 1.2 ಲಕ್ಷ ಟನ್ ಈರುಳ್ಳಿ ಆಮದು ಮಾಡಿಕೊಳ್ಳಲು ಒಪ್ಪಿಗೆ ನೀಡಿದೆ ಎಂದು ಸಚಿವರು ತಿಳಿಸಿದರು.

ಗೋವಾದ ಪಣಜಿಯಲ್ಲಿ ಈರುಳ್ಳಿ ಬೆಲೆ 165 ರೂ.ಗೆ ತಲುಪಿದೆ. ಗೋವಾ ಸರ್ಕರ ರಾಜ್ಯದ ಜನತೆಗೆ ಸಬ್ಸಿಡಿ ದರದಲ್ಲಿ ತರಕಾರಿ ನೀಡುತ್ತಿದೆಯಾದರೂ, ಈರುಳ್ಳಿ ನೀಡುವಲ್ಲಿ ವಿಫಲವಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಫಲೋತ್ಪಾದನ ಮಹಾಮಂಡಳದ ಅಂಗಡಿಗಳಲ್ಲೂ ಈರುಳ್ಳಿ ಬೆಲೆ 129 ರೂ.ಗೆ ತಲುಪಿದೆ. ಸದ್ಯದ ಪರಿಸ್ಥಿತಿ ನೋಡಿದರೆ ಮುಂದೆ ಈರುಳ್ಳಿ ದರ 200 ರೂ. ಗಡಿ ದಾಟಿದರು ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.

ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಗಟು ಈರುಳ್ಳಿ ಬೆಲೆ 1 ಕೆ.ಜಿ.ಗೆ 150 ರೂ. ದಾಟಿದೆ. ಮಾರುಕಟ್ಟೆಗೆ ಹೊಸ ಈರುಳ್ಳಿ ಪೂರೈಕೆಯಾಗುವ ತನಕ ಮುಂದಿನ ವರ್ಷ ಜನವರಿ 20ವರೆಗೆ ಇದೇ ಬೆಲೆ ಇರುವ ನಿರೀಕ್ಷೆ ಇದೆ.

SCROLL FOR NEXT