ದೇಶ

ಸೇಡು ತೀರಿಸಿಕೊಂಡರೆ ನ್ಯಾಯ ತನ್ನ ಸ್ವರೂಪ ಕಳೆದುಕೊಳ್ಳುತ್ತದೆ: ಹೈದರಾಬಾದ್​ ಎನ್​ಕೌಂಟರ್​ ಗೆ ಸಿಜೆಐ ಬೋಬ್ಡೆ ಪ್ರತಿಕ್ರಿಯೆ

Lingaraj Badiger

ಜೋಧ್​ಪುರ: ದೇಶವನ್ನೇ ಬೆಚ್ಚಿಬೀಳಿಸಿದ್ದ ಹೈದರಾಬಾದ್ ಪಶು ವೈದ್ಯೆ ಮೇಲಿನ ಅಚ್ಯಾಚಾರ ಮತ್ತು ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳನ್ನು ಪೊಲೀಸರು ಶುಕ್ರವಾರ ಎನ್ ಕೌಂಟರ್ ಮಾಡಿದ್ದು, ಈ ಬಗ್ಗೆ ಪರ- ವಿರೋಧ ಚರ್ಚೆಗಳು ಆರಂಭವಾಗಿವೆ.

ಇನ್ನು ಈ ಕುರಿತು ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿರುವ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ಎ ಬೋಬ್ಡೆ ಅವರು, ನ್ಯಾಯವನ್ನು ಪ್ರತೀಕಾರದ ರೂಪದಲ್ಲಿ ಪಡೆಯಬರಾದು. ಒಂದು ವೇಳೆ ಸೇಡಿನ ರೂಪದಲ್ಲಿ ನ್ಯಾಯವನ್ನು ಪಡೆದುಕೊಂಡರೆ ನ್ಯಾಯದ ಸ್ವರೂಪವನ್ನೇ ಕಳೆದುಕೊಳ್ಳಲಿದೆ ಎಂದು ಹೇಳಿದ್ದಾರೆ.

ನ್ಯಾಯ ಎಂದಿಗೂ ತ್ವರಿತವಾಗಿ ದೊರೆಯುವುದಿಲ್ಲ. ಒಂದು ವೇಳೆ ಸೇಡು ತೀರಿಸಿಕೊಂಡರೆ ನ್ಯಾಯ ತನ್ನ ಪಾತ್ರವನ್ನೇ ಕಳೆದುಕೊಳ್ಳಲಿದೆ ಎಂದು ಸಿಜೆಐ ಅಭಿಪ್ರಾಯಪಟ್ಟಿದ್ದಾರೆ.

ಇಂದು ಜೋಧ್​ಪುರದಲ್ಲಿ ನಡೆದ ನೂತನ ರಾಜಸ್ಥಾನ ಹೈಕೋರ್ಟ್​ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಬೋಬ್ಡೆ ಅವರು, ನ್ಯಾಯಾಂಗ ವ್ಯವಸ್ಥೆಯಲ್ಲಿ ಹೊಸ ತಂತ್ರಜ್ಞಾನಗಳ ಪರಿಚಯ ಹಾಗೂ ಸಂಧಾನ ಸೇರಿದಂತೆ ವಿವಾದಗಳನ್ನು ಬಗೆಹರಿಸುವಲ್ಲಿ ಇರುವ ಪರ್ಯಾಯ ವ್ಯವಸ್ಥೆಗಳನ್ನು ಬಲಪಡಿಸಬೇಕಾಗಿದೆ ಎಂದರು.

ಹೈದರಾಬಾದ್​ ಎನ್​ಕೌಂಟರ್​ ಕುರಿತು ನ್ಯಾಯಾಂಗ ಸುಧಾರಣೆ, ಮರಣದಂಡನೆ ಹಾಗೂ ಬಹುಬೇಗ ನ್ಯಾಯ ದೊರಕುವ ವಿಚಾರವಾಗಿ ದೇಶದಲ್ಲೆಡೆ ನಡೆಯುತ್ತಿರುವ ಚರ್ಚೆಯನ್ನು ಗಮನದಲ್ಲಿಟ್ಟುಕೊಂಡು ಬೊಬ್ಡೆ ಈ ಮಾತುಗಳನ್ನು ಹೇಳಿದ್ದಾರೆ.

ಹತ್ಯಾಚಾರ ಆರೋಪಿಗಳನ್ನು ಘಟನಾಸ್ಥಳಕ್ಕೆ ಪಂಚನಾಮೆಗೆ ಕರೆದೊಯ್ದ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದರು. ಅಲ್ಲದೆ ಪೊಲೀಸರ ಮೇಲೆ ಕಲ್ಲುಗಳನ್ನು ತೂರಿದರು ಮತ್ತು ಪೊಲೀಸರ ಕೈಯಲ್ಲಿದ್ದ ಪಿಸ್ತೂಲನ್ನು ಕಿತ್ತುಕೊಂಡು ಹಲ್ಲೆಗೆ ಮುಂದಾದರು. ಈ ಸಂದರ್ಭದಲ್ಲಿ ಅನಿವಾರ್ಯವಾಗಿ ಪೊಲೀಸರು ಗುಂಡು ಹಾರಿಸಬೇಕಾಯಿತು ಎಂದು ಸೈಬರಾಬಾದ್​ ಪೊಲೀಸ್​ ಆಯುಕ್ತ ಸಿ. ವಿಶ್ವನಾಥ್​ ಸಜ್ಜನರ್ ಅವರು ಎನ್ ಕೌಂಟರ್ ಬಗ್ಗೆ ವಿವರಿಸಿದ್ದರು.

SCROLL FOR NEXT