ದೇಶ

ಅನಜ್ ಮಂಡಿ ಅವಘಡ: ಅಗ್ನಿ ಶಾಮಕ ದಳಕ್ಕೆ ಅಷ್ಟೊಂದು ಜನ ಸಿಲುಕಿದ್ದರ ಬಗ್ಗೆ ಅರಿವಿರಲಿಲ್ಲ!

Srinivas Rao BV

ದೆಹಲಿ: ದೆಹಲಿಯ ಅನಜ್ ಮಂಡಿ ಅವಘಡದಲ್ಲಿ 43 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 1997 ರಲ್ಲಿ ಸಂಭವಿಸಿದ್ದ ಉಪಹಾರ್ ಸಿನಿಮಾ ಅಗ್ನಿ ದುರಂತದ ನಂತರದಲ್ಲಿ ಅತಿ ದೊಡ್ಡ ಅಗ್ನಿ ದುರಂತ ಇದಾಗಿದೆ. 

ಅಗ್ನಿ ಶಾಮಕ ವಿಭಾಗೀಯ ಅಧಿಕಾರಿ ಈ ಪ್ರಕರಣದ ರಕ್ಷಣಾ ಕಾರ್ಯಾಚರಣೆ ಕುರಿತು ಕೆಲವೊಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ಮೊದಲ ಬಾರಿಗೆ ಫೈರ್ ಫೈಟರ್ ಗಳು ಸ್ಥಳಕ್ಕೆ ಆಗಮಿಸುತ್ತುದ್ದಂತೆಯೇ ಅವರಿಗೆ 4 ಅಂತಸ್ತಿನ ಕಟ್ಟಡದಲ್ಲಿ ಈ ಪರಿಪ್ರಮಾಣದಲ್ಲಿ ಜನ ಸಿಲುಕಿಕೊಂಡಿರುವ ಅಂದಾಜು ಅಥವಾ ಅರಿವು ಇರಲಿಲ್ಲವಂತೆ. 

ಕಟ್ಟಡದಲ್ಲಿ ಆವರಿಸಿಕೊಂಡಿದ್ದ ಹೊಗೆಯ ನಡುವೆಯೇ ಮೊದಲ ಮಹಡಿಗೆ ರಕ್ಷಣಾ ಕಾರ್ಯಾಚರಣೆಗೆಂದು ಹೋದವರಿಗೆ ತಕ್ಷಣವೇ 2 ನೇ ಮಹಡಿಯಿಂದಲೂ ರಕ್ಷಣೆಗಾಗಿ ಕರೆ ಬಂದಿದೆ. ಅಲ್ಲಿ ಸಿಲುಕಿಕೊಂಡಿರುವುದು ಒಬ್ಬನೇ ವ್ಯಕ್ತಿ ಎಂದುಕೊಂಡ ಅಗ್ನಿಶಾಮಕ ಸಿಬ್ಬಂದಿಗೆ ಹಲವು ಮಂದಿ ಅಲ್ಲಿ ಸಿಲುಕಿಕೊಂಡು ರಕ್ಷಣೆಗೆ ಮೊರೆ ಇಡುತ್ತಿರುವುದು ಗೋಚರವಾಗಿದೆ. 

ಹೆಚ್ಚುವರಿ ವಿಭಾಗೀಯ ಅಧಿಕಾರಿ ರಾಜೇಶ್ ಶುಕ್ಲಾ 10-12 ಜನರನ್ನು ರಕ್ಷಣೆ ಮಾಡುವ ವೇಳೆಗೆ 2 ನೇ ಮಹಡಿಯ ಮತ್ತೊಂದು ಕೊಠಡಿಯಲ್ಲಿ 30 ಕ್ಕೂ ಹೆಚ್ಚು ಜನರು ಸಿಲುಕಿರುವುದು ಕಂಡುಬಂದಿದೆ. ಇಡಿಯ ಕಟ್ಟಡ ದಟ್ಟ ಹೊಗೆಯಿಂದ ಆವೃತವಾಗಿದ್ದ ಕಾರಣ ರಕ್ಷಣಾ ಕಾರ್ಯಾಚರಣೆ ಕಷ್ಟ ಸಾಧ್ಯವಾಯಿತು ಎಂದು ರಾಜೇಶ್ ಶುಕ್ಲಾ ಹೇಳಿದ್ದಾರೆ.
 
"ಉಸಿರಾಟದ ಉಪಕರಣಗಳನ್ನು ಹೊತ್ತು 2 ನೇ ಬಾರಿಗೆ ರಕ್ಷಣಾ ಕಾರ್ಯಾಚರಣೆಗೆ ಹೋದೆ, ಈ ವೇಳೆಗೆ ಆಗಲೆ ಬೆಂಕಿಯ ಕೆನ್ನಾಲಗೆ ಮತ್ತಷ್ಟು ವ್ಯಾಪಿಸಿತ್ತು. ಹೆಚ್ಚುವರಿ ತಂಡಗಳನ್ನೂ ರಕ್ಷಣಾ ಕಾರ್ಯಾಚರಣೆಗೆ ಕಳಿಸಲಾಗಿತ್ತು. ಆದರೆ ಉಸಿರಾಟದ ಉಪಕರಣ ಸಂಪೂರ್ಣವಾಗಿ ಬಳಕೆಯಾದ್ದರಿಂದ ನಾನು ಕೆಳಗೆಯೇ ಉಳಿಯಬೇಕಾಯಿತು ಎಂದು ರಾಜೇಶ್ ಶುಕ್ಲಾ ಮಾಹಿತಿ ನೀಡಿದ್ದಾರೆ. 

SCROLL FOR NEXT