ದೇಶ

ಕಾಶ್ಮೀರ ಪರಿಸ್ಥಿತಿ ಸಾಮಾನ್ಯವಾಗಿದೆ, ಕಾಂಗ್ರೆಸ್ ಪರಿಸ್ಥಿತಿಯನ್ನೇ ಸರಿಪಡಿಸಲಾಗುತ್ತಿಲ್ಲ: ಗೃಹ ಸಚಿವ ಅಮಿತ್ ಶಾ

Manjula VN

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿನ ಪರಿಸ್ಥಿತಿ ಎಲ್ಲವೂ ಸಾಮಾನ್ಯವಾಗಿದೆ. ಆದರೆ, ಕಾಂಗ್ರೆಸ್ ಪರಿಸ್ಥಿತಿಯನ್ನೇ ಸರಿಪಡಿಸಲು ಸಾಧ್ಯವಾಗುತ್ತಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಅವರು ಹೇಳಿದ್ದಾರೆ. 

ಲೋಕಸಭೆಯಲ್ಲಿ ಮಾತನಾಡಿದ ಅವರು, ಕಾಶ್ಮೀರದಲ್ಲಿನ ಎಲ್ಲಾ ಪರಿಸ್ಥಿತಿ ಸಾಮಾನ್ಯವಾಗಿದೆ. ಆದರೆ, ಕಾಂಗ್ರೆಸ್ ಪರಿಸ್ಥಿತಿಯನ್ನೇ ಸಾಮಾನ್ಯವಾಗಿಸಲು ಸಾಧ್ಯವಾಗುತ್ತಿಲ್ಲ. 370ನೇ ವಿಧಿ ರದ್ದುಗೊಂಡರೆ ಕಾಶ್ಮೀರದಲ್ಲಿ ರಕ್ತದೋಕುಳಿ ಹರಿಯುತ್ತದೆ ಎಂದು ಹೇಳಿದ್ದರು. ಆದರೆ, ಅದಾವೂದೂ ಆಗಲಿಲ್ಲ. ಒಂದೇ ಒಂದು ಗುಂಡು ಕೂಡ ಹಾರಲಿಲ್ಲ ಎಂದು ಹೇಳಿದ್ದಾರೆ. 

ಬಂಧನದಲ್ಲಿರುವವರನ್ನು ಒಂದು ದಿನ ಕೂಡ ಹೆಚ್ಚಾಗಿ ಜೈಲಿನಲ್ಲಿ ಇರಿಸಿಕೊಳ್ಳಲು ನಮಗೆ ಇಷ್ಟವಿಲ್ಲ. ಆದರೆ, ಪರಿಸ್ಥಿತಿ ಹಾಗೂ ಸೂಕ್ತ ಸಮಯ ಬಂದಾಗ ರಾಜಕೀಯ ನಾಯಕರನ್ನು ಬಿಡುಗಡೆ ಮಾಡಲಾಗುತ್ತದೆ. ರಾಜಕೀಯ ನಾಯಕರ ಬಿಡುಗಡೆಗೆ ಸೂಕ್ತ ಸಮಯಕ್ಕಾಗಿ ಆಡಳಿತ ಮಂಡಳಿ ಕಾಯುತ್ತಿದೆ. ಫಾರೂಖ್ ಅಬ್ದುಲ್ಲಾ ಅವರ ತಂದೆಯನ್ನು ಕಾಂಗ್ರೆಸ್ 11 ವರ್ಷಗಳ ಕಾಲ ಕಾರಾಗೃಹದಲ್ಲಿರಿಸಿತ್ತು. ಅವರನ್ನು ನಾವು ಅನುಸರಿಸುವುದಿಲ್ಲ. ಆಡಳಿತ ಮಂಡಳಿ ನಿರ್ಧಾರ ಕೈಗೊಳ್ಳುತ್ತಿದ್ದಂತೆಯೇ ಅವರನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. 

ಶೇ.99.5ರಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತುಕೊಂಡಿದ್ದಾರೆ. ಅಧೀರ್ ರಂಜನ್ ಅವರೇ ಇದು ಕಾಶ್ಮೀರದಲ್ಲಿ ಪರಿಸ್ಥಿತಿ ಸಾಮಾನ್ಯವಾಗಿದೆ ಎಂಬುದನ್ನು ತೋರಿಸುತ್ತಿಲ್ಲವೇ? ಶ್ರೀನಗರದಲ್ಲಿ 7 ಲಕ್ಷ ಜನರು ಒಪಿಡಿ ಸೇವೆಗಳನ್ನು ಪಡೆದುಕೊಂಡಿದ್ದಾರೆ. ಕಾಶ್ಮೀರದಾದ್ಯಂತ ಸೆಕ್ಷನ್ 144 ನ್ನು ತೆಗೆದು ಹಾಕಲಾಗಿದೆ. ಆದರೆ, ಅಧೀರ್ ಅವರಿಗೆ ಸಾಮಾನ್ಯ ಪರಿಸ್ಥಿತಿಯೆಂದರೆ ರಾಜಕೀಯ ಚಟುವಟಿಕೆಗಳು ಮಾತ್ರ. ಸ್ಥಳೀಯ ಚುನಾವಣೆ ನಡೆದಿದ್ದರ ಬಗ್ಗೆ ಏನು ಹೇಳುತ್ತೀರಿ ಎಂದು ಪ್ರಶ್ನಿಸಿದ್ದಾರೆ. 

SCROLL FOR NEXT