ದೇಶ

ಪೌರತ್ವ ಮಸೂದೆ: ಈಶಾನ್ಯದಲ್ಲಿ ಮುಂದುವರೆದ ಪ್ರತಿಭಟನೆ, ಗುವಾಹತಿ, ದಿಬ್ರೂಗಢ್ ನಲ್ಲಿ ಕರ್ಫ್ಯೂ ಸಡಿಲಿಕೆ

Srinivasamurthy VN

ಗುವಾಹತಿ: ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಈಶಾನ್ಯ ಭಾರತದ ರಾಜ್ಯಗಳಲ್ಲಿ ನಡೆಯುತ್ತಿರುವ ಪ್ರತಿಭಟನೆ ಮುಂದುವರೆದಿರುವಂತೆಯೇ ಇತ್ತ ಅಸ್ಸಾಂನ ಗುವಾಹತಿ ಮತ್ತು ದಿಬ್ರೂಗಢ್ ನಲ್ಲಿ ಹೇರಲಾಗಿದ್ದ ಕರ್ಫ್ಯೂವನ್ನು ಸಡಿಸಿಲಾಗಿದೆ.

ದಿಬ್ರೂಗಢ್ ಮತ್ತು ಗುವಾಹತಿಯಲ್ಲಿ ಬೆಳಗ್ಗೆ 7 ಗಂಟೆಯಿಂದ ಸಂಜೆ 4 ಗಂಟೆಯವರೆಗೂ ಕರ್ಫ್ಯೂ ಸಡಿಲಿಸಲಾಗಿದ್ದು, ಪೂರ್ವ ದಿಬ್ರೂಘಡ್, ನಹಾರ್ ಕಟಿಯಾ, ಟೆನಾಟ್ ಮತ್ತು ಇತರೆ ಪ್ರದೇಶಗಳಲ್ಲಿ ಹೇರಲಾಗಿದ್ದ ಕರ್ಫ್ಯೂವನ್ನು ಸಡಿಲಿಸಲಾಗಿದೆ. ಕರ್ಫ್ಯೂ ಸಡಿಲಿಸಿದ ಪರಿಣಾಮ ಅಂಗಡಿ ಮುಂಗಟ್ಟುಗಳು ತೆರೆದಿದ್ದು, ದಿನಬಳಕೆಯ ವಸ್ತುಗಳ ಅಂಗಡಿಗಳ ಮುಂದೆ ಸರತಿ ಸಾಲು ಸಾಮಾನ್ಯವಾಗಿತ್ತು. ಕ್ಯೂನಲ್ಲಿ ನಿಂತು ಜನ ತಮಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡುತ್ತಿದ್ದರು.

ದಿಸ್ ಪುರ್, ಉಜಾನ್ ಬಜಾರ್, ಚಂದಮಾರಿ, ಸಿಲ್ಪುಖುರಿ ಮತ್ತು ಜೂರಸ್ತೆಗಳಲ್ಲಿನ ಮಾರ್ಕೆಟ್ ಗಳು ಜನರಿಂದ ತುಂಬಿ ತುಳುಕುತ್ತಿತ್ತು. 

ಮುಂದುವರೆದ ಪ್ರತಿಭಟನೆ
ಇನ್ನು ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ವಿರೋಧಿಸಿ ಈಶಾನ್ಯ ಭಾರತದ ರಾಜ್ಯಗಳಲ್ಲಿ ಶನಿವಾರವೂ ಪ್ರತಿಭಟನೆ ಮುಂದುವರಿದಿದೆ. ಹಲವೆಡೆ ಹಿಂಸಾಚಾರ ನಡೆದಿದ್ದು, ಅಸ್ಸಾಂನಲ್ಲಿ ಇಂಧನ ಟ್ಯಾಂಕರ್‌ಗೆ ಬೆಂಕಿ ಹಚ್ಚಲಾಗಿದ್ದು, ಈ ವೇಳೆ ಚಾಲಕ ಮೃತಪಟ್ಟಿದ್ದಾನೆ. ಇಂಟರ್ನೆಟ್‌ ಸೇವೆ ಸ್ಥಗಿತವನ್ನು ಸೋಮವಾರದವರೆಗೆ ವಿಸ್ತರಿಸಲಾಗಿದೆ. 

ಇನ್ನು ಮೇಘಾಲಯದಲ್ಲಿ ರಾಜಭವನಕ್ಕೆ ಮುತ್ತಿಗೆ ಹಾಕಲು ಪ್ರತಿಭಟನಕಾರರು ಯತ್ನಿಸಿದ್ದಾರೆ. ಐದು ರೈಲುಗಳು, 15 ಬಸ್‌ಗಳಿಗೆ ಬೆಂಕಿ ಹಚ್ಚಲಾಗಿದ್ದು, ರಾಜ್ಯದ ಹಲವೆಡೆ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ. ಡಿಸೆಂಬರ್ 19ರಂದು ದೇಶದಾದ್ಯಂತ ಪ್ರತಿಭಟನೆ ನಡೆಸಲು 60 ಸಂಘಟನೆಗಳು ಕರೆ ನೀಡಿವೆ.

SCROLL FOR NEXT