ದೇಶ

ಪಶ್ಚಿಮ ಬಂಗಾಳ: ರೈಲ್ವೆ ನಿಲ್ದಾಣದ ಹಾನಿ ಪರಿಶೀಲಿಸಲು ತೆರಳಿದ್ದ ಇಬ್ಬರು ಬಿಜೆಪಿ ಸಂಸದರ ಬಂಧನ

Lingaraj Badiger

ಕೋಲ್ಕತಾ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಧ್ವಂಸಗೊಳಿಸಲಾಗಿದ್ದ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಲು ತೆರಳುತ್ತಿದ್ದ ಇಬ್ಬರು ಬಿಜೆಪಿ ಸಂಸದರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಭುಲಕ ರಸ್ತೆ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಲು ಯತ್ನಿಸಿದ ಬಿಜೆಪಿ ಸಂಸದರಾದ ನಿಶಿತ್ ಪ್ರಮಾಣಿಕ್ ಮತ್ತು ಖಗನ್ ಮುರ್ಮು ಅವರನ್ನು ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ಹಲವು ರಾಜ್ಯಗಳಲ್ಲಿ ಪ್ರತಿಭಟನೆ ಮುಂದುವರೆದಿದ್ದು, ಕಳೆದ ಶನಿವಾರ ಪಶ್ಚಿಮ ಬಂಗಾಳದಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ, ಕನಿಷ್ಠ ಎರಡು ರೈಲು ಹಾಗೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ಬಸ್ ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಗಿತ್ತು.

ಪ್ರತಿಭಟನಾಕಾರರು ರೈಲು ನಿಲ್ದಾಣಕ್ಕೂ ಬೆಂಕಿ ಹಚ್ಚಿದ್ದರಿಂದ ರೈಲು ನಿಲ್ದಾಣ ಭಾಗಶಃ ಸುಟ್ಟುಹೋಗಿದೆ. ಅಲ್ಲದೆ ರೈಲು ನಿಲ್ದಾಣದಲ್ಲಿದ್ದ ಫಲಕಗಳು, ಕಾಂಕ್ರೀಟ್ ಬೆಂಚುಗಳನ್ನು ಧ್ವಂಸ ಮಾಡಿದ್ದಾರೆ. ಇದನ್ನು ತಡೆಯಲು ಬಂದ ರೈಲ್ವೆ ಪೊಲೀಸರ ಮೇಲೆ ಹಲ್ಲೆ ನಡೆಸಲಾಗಿದೆ. ಇದರ ಬೆನ್ನಲ್ಲೇ ಜಿಲ್ಲೆಯ ಹಲವೆಡೆ ರೈಲು ತಡೆ ನಡೆಸಲಾಗಿತ್ತು.

SCROLL FOR NEXT