ಮುಜಾಫರ್ ನಗರ: ಪೌರತ್ವ ಕಾಯ್ದೆ ವಿರೋಧಿಸುವ ಸಂದರ್ಭದಲ್ಲಿ ಸಾರ್ವಜನಿಕರ ಆಸ್ತಿ-ಪಾಸ್ತಿಗಳಿಗೆ ಹಾನಿ ಮಾಡುವವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಹೇಳಿದ್ದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇದೀಗ ಆ ಕೆಲಸಕ್ಕೆ ಮುಂದಾಗಿದ್ದು 67 ಅಂಗಡಿಗಳನ್ನು ಜಪ್ತಿ ಮಾಡಿಸಿದ್ದಾರೆ.
ಉತ್ತರ ಪ್ರದೇಶ ಲಖನೌ, ಮುಜಾಫರ್ ನಗರ, ರಾಂಪುರ ಸೇರಿದಂತೆ ಹಲವು ಕಡೆಗಳಲ್ಲಿ ನಡೆದಿದ್ದ ಗಲಭೆಯಲ್ಲಿ ಭಾಗಿಯಾಗಿದ್ದ ಪ್ರತಿಭಟನಾಕಾರರ 67 ಅಂಗಡಿಗಳಿಗೆ ಬೀಗ ಜಡಿಯಲಾಗಿದೆ. ಪ್ರತಿಭಟನೆಯಲ್ಲಿ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ ದಂಗೆಕೋರರನ್ನು ಗುರುತಿಸಿ ನೋಟಿಸ್ ನೀಡಲಾಗಿದೆ.
ಮುಜಾಫರ್ ನಗರದಲ್ಲಿ ಕಳೆದ ಶುಕ್ರವಾರ ಪ್ರಾರ್ಥನೆ ಬಳಿಕ ಪ್ರತಿಭಟನಾಕಾರರು ಗಲಭೆ ನಡೆಸಿದ್ದರು. ಈ ವೇಳೆ 20ಕ್ಕೂ ಹೆಚ್ಚು ಬೈಕ್, ಹಲವು ಕಾರುಗಳು ಮತ್ತು ಸಾರ್ವಜನಿಕ ಆಸ್ತಿಗಳಿಗೆ ಬೆಂಕಿ ಹಚ್ಚಿದ್ದು ಅಲ್ಲದೆ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಇದರಲ್ಲಿ 15ಕ್ಕೂ ಹೆಚ್ಚು ಪೊಲೀಸರಿಗೆ ಗಾಯಗಳಾಗಿತ್ತು.
ಇನ್ನು ಗಲಭೆಕೋರರನ್ನು ಗುರುತಿಸುವ ಸಲುವಾಗಿ ಅಲ್ಲಿ ಸರ್ಕಾರ ಡ್ರೋನ್ ಗಳನ್ನು ಬಳಸಿತ್ತು. ಅಲ್ಲೆದ ಆ ಭಾಗಗಳಲ್ಲಿ ಬರುವ ಸಿಸಿಟಿವಿಗಳನ್ನು ಪರಿಶೀಲಿಸಿ ಈ ಕ್ರಮ ಕೈಗೊಳ್ಳಲಾಗಿದೆ.