ದೇಶ

ಶಾಹೀನ್ ಬಾಗ್‌: ಕೊರೆಯುವ ಚಳಿಯಲ್ಲೂ ಸಿಎಎ ವಿರುದ್ಧ ಅಹೋರಾತ್ರಿ ಮಹಿಳೆಯರ ಪ್ರತಿಭಟನೆ

Nagaraja AB

ನವದೆಹಲಿ: ನೂತನ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್ ಆರ್ ಸಿ  ವಿರೋಧಿಸಿ  ನವದೆಹಲಿಯ ಶಾಹೀನ್ ಬಾಗ್ ನಲ್ಲಿ ಕೊರೆಯುವ ಚಳಿಯಲ್ಲೂ ಸುಮಾರು 200 ಮಹಿಳೆಯರು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. 

ಡಿಸೆಂಬರ್ 14ರಿಂದ ನಡೆಯುತ್ತಿರುವ ಪ್ರತಿಭಟನೆಯಿಂದಾಗಿ ನೊಯ್ಡಾ ಹಾಗೂ ದಕ್ಷಿಣ ದೆಹಲಿ ನಡುವಣ ರಸ್ತೆಯಲ್ಲಿ ಸಂಚಾರವನ್ನು ಸ್ಥಗಿತಗೊಳಿಸಲಾಗಿದ್ದು, ಧಾರ್ಮಿಕ ಮುಖಂಡರು ಹಾಗೂ ಸ್ಥಳೀಯರ ಜೊತೆಗೆ ಕಳೆದ ಐದು ದಿನಗಳಿಂದ ಅನೇಕ ಸಭೆಗಳನ್ನು ನಡೆಸುವ ಮೂಲಕ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಾಪಾಸ್ ಪಡೆಯುವವರೆಗೂ ಪ್ರತಿಭಟನೆಯನ್ನು ವಾಪಾಸ್ ಪಡೆಯುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ. ಜಾಮಿಯಾ ಮಿಲಿಯಾ ಇಸ್ಲಾಮಿಯಾ ಬಳಿ ನಡೆದ ಹಿಂಸಾಚಾರದ ವೇಳೆಯಲ್ಲೂ ಶಾಹೀನ್ ಬಾಗ್ ಮಹಿಳೆಯರು ಮುಂಚೂಣಿಯಲ್ಲಿದ್ದರು. 

ಪ್ರಯಾಣಿಕರಿಗೆ ತೊಂದರೆಯಾಗುತ್ತಿರುವುದರಿಂದ ಸ್ಥಳೀಯ ಧಾರ್ಮಿಕ ಮುಖಂಡರನ್ನು ಕರೆಸಿ ಪರಿಸ್ಥಿತಿಯನ್ನು ಪ್ರತಿಭಟನಾಕಾರರಿಗೆ ಮನವರಿಕೆ ಮಾಡಿಕೊಡಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಆದರೆ, ಬಲವಂತದಿಂದ ನಮ್ಮ ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸರು ಯೋಚಿಸಿದ್ದರು ಎಂದು ಪ್ರತಿಭಟನಾಕಾರರು ಹೇಳಿದ್ದಾರೆ. 

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮುಸ್ಲಿಂರ ಮೇಲೆ ತಾರತಮ್ಯ ಮಾಡಲಾಗುತ್ತಿದೆ. ಎನ್ ಆರ್ ಸಿ ಜಾರಿಗೆ ಬಂದ ಮೇಲೆ ಅಸ್ಸಾಂ ಮತ್ತಿತರ ಕಡೆಗಳಲ್ಲಿ ತೀವ್ರ ಪರಿಣಾಮ ಬೀರಲಿದೆ. ಆ  ಅನ್ಯಾಯಕ್ಕೆ ಸಾಕ್ಷಿಯಾಗಬಾರದೆಂಬ ಉದ್ದೇಶದಿಂದ ಇಡೀ ರಾತ್ರಿ ಪ್ರತಿಭಟನೆಗೆ ಕುಳಿತಿರುವುದಾಗಿ ಪ್ರತಿಭಟನಾಕಾರರು ಹೇಳುತ್ತಾರೆ. 

SCROLL FOR NEXT