ನವದೆಹಲಿ: ದೇಶಾದ್ಯಂತ ಸುಮಾರು 100 ಸಂಘಟನೆಗಳು ಪೌರತ್ವ (ತಿದ್ದುಪಡಿ) ಕಾಯ್ದೆ, ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಮತ್ತು ನಾಗರಿಕರ ರಾಷ್ಟ್ರೀಯ ನೋಂದಣಿ ವಿರುದ್ಧ "ವಿ ದಿ ಪೀಪಲ್ ಆಫ್ ಇಂಡಿಯಾ" ಎಂಬ ಒಂದೇ ಬ್ಯಾನರ್‌ನಲ್ಲಿ ಹೋರಾಡಲು ನಿರ್ಧರಿಸಿವೆ.
ಸಿಎಎ, ಎನ್‌ಪಿಆರ್ ಮತ್ತು ರಾಷ್ಟ್ರವ್ಯಾಪಿ ಎನ್‌ಆರ್‌ಸಿ ವಿರುದ್ಧ ಪ್ರತಿಭಟಿಸುತ್ತಿರುವ ಎಲ್ಲ ಜನರಿಗೆ ನಾವು "ವಿ ದಿ ಪೀಪಲ್ ಆಫ್ ಇಂಡಿಯಾ" ಎಂಬ ಒಂದೇ ಬ್ಯಾನರ್‌ನಡಿಯಲ್ಲಿ ಬರುವಂತೆ ಮನವಿ ಮಾಡುತ್ತಿದ್ದೇವೆ. ಇದು ನಮ್ಮ ಸಂವಿಧಾನದ ಮೊದಲ ನುಡಿಗಟ್ಟು ಮತ್ತು ಅದಕ್ಕಿಂತ ದೊಡ್ಡದು ಏನೂ ಇರಲು ಸಾಧ್ಯವಿಲ್ಲ ಎಂದು ಸ್ವರಾಜ್ ಅಭಿಯಾನ್ ಪಕ್ಷದ ಸಂಸ್ಥಾಪಕ ಯೋಗೇಂದ್ರ ಯಾದವ್ ಹೇಳಿದ್ದಾರೆ.
ಪ್ರಮುಖ ವ್ಯಕ್ತಿಗಳ ಜನ್ಮ ದಿನ ಅಥವಾ ಪುಣ್ಯತಿಥಿಯನ್ನು ಗುರುತಿಸುವ ಮಹತ್ವದ ದಿನಗಳಲ್ಲಿ ಈ ಗುಂಪುಗಳು ಜನವರಿಯಲ್ಲಿ ರಾಷ್ಟ್ರವ್ಯಾಪಿ ಪ್ರತಿಭಟನೆ ಮತ್ತು ಪ್ರದರ್ಶನಗಳನ್ನು ನಡೆಸಲಿವೆ. ಸಾವಿತ್ರಿಬಾಯಿ ಫುಲೆ ಅವರ ಜನ್ಮ ದಿನಾಚರಣೆಯಾದ ಜನವರಿ 3 ರಿಂದ ಸರಣಿ ಪ್ರತಿಭಟನೆಗಳು ಪ್ರಾರಂಭವಾಗಲಿವೆ.