ದೇಶ

ಇದು ಹಿಂದೂಗಳ ದೇಶ, ಮಂದಿರ ನಿರ್ಮಾಣ ಮಾಡುವವರನ್ನು ನಾವು ಬೆಂಬಲಿಸಬೇಕು: ಮೋಹನ್ ಭಾಗವತ್

Shilpa D
ಲಕ್ನೋ: ಲೋಕಸಭೆ ಚುನಾವಣೆ ನಂತರ ರಾಮಮಂದಿರ ನಿರ್ಮಾಣ ಕಾರ್ಯ ಆರಂಭವಾಗುತ್ತದೆ  ಎಂದು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಕುಂಭಮೇಳದ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್‌ ಆಯೋಜಿಸಿದ್ದ ಎರಡು ದಿನಗಳ 'ಧರ್ಮ ಸಂಸತ್‌'ನ ಕೊನೆಯ ದಿನವಾದ ಶುಕ್ರವಾರ ಮಾತನಾಡಿದ ಅವರು, ರಾಮ ಮಂದಿರ ನಿರ್ಮಾಣಕ್ಕಾಗಿ ಬಿಜೆಪಿಗೆ ಮತ್ತೊಂದು ಅವಕಾಶ ನೀಡುವಂತೆ  ಮನವಿ ಮಾಡಿದ್ದಾರೆ.
''ನಮ್ಮ ಆಂದೋಲನದಿಂದ ಸರ್ಕಾರ ಯಾವುದೇ ತೊಂದರೆ ಅನುಭವಿಸದು, ಬದಲಾಗಿ ಅನುಕೂಲವೇ ಆಗಲಿದೆ..ಶೀಘ್ರವಾಗಿ ಮಂದಿರ ನಿರ್ಮಾಣಕ್ಕೆ ಇದು ಸಹಾಯಕವಾಗಲಿದೆ. ನಿಮ್ಮ (ಸಾಧುಗಳ) ಆಶೀರ್ವಾದ, ನಮ್ಮ ಕೆಲಸ ಹಾಗೂ ಜನತೆಯ ಅಪೇಕ್ಷೆ ಖಂಡಿತವಾಗಿಯೂ ಫಲಿಸಲಿದೆ. ಈ ವಿಚಾರವಾಗಿ ನಿರಾಸೆಪಡುವ ಅಗತ್ಯವೇ ಇಲ್ಲ,'' ಎಂದು ಭಾಗವತ್‌ ಹೇಳಿದ್ದಾರೆ.
ದ್ವಾರಕಾಪೀಠದ ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ಅವರು ಫೆ.21ರಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸುವುದಾಗಿ ಕುಂಭಮೇಳದಲ್ಲೇ ನಡೆದ 'ಪರಮ ಧರ್ಮ ಸಂಸತ್‌'ನಲ್ಲಿ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭಾಗವತ್‌ ಹೇಳಿಕೆ ಮಹತ್ವ ಪಡೆದಿದೆ. 
ಮತ್ತೊಂದೆಡೆ ಮಹಾಮಂಡಲೇಶ್ವರ ಅಖಿಲೇಶ್ವರಾನಂದ ಮಂಡಿಸಿದ ಧರ್ಮ ಸಂಸತ್‌ ನಿರ್ಣಯದಲ್ಲಿ ಮಂದಿರ ನಿರ್ಮಾಣದ ಪ್ರಸ್ತಾಪ ಇಲ್ಲ. ''ಮಂದಿರ ನಿರ್ಮಾಣದ ವಿಚಾರ ರಾಜಕೀಯವಾಗಿ ಬಳಕೆಯಾಗುವುದನ್ನು ತಡೆಯುವ ಉದ್ದೇಶದಿಂದ ಧರ್ಮ ಸಂಸತ್‌ ವೇದಿಕೆಯಿಂದ ಈ ಕುರಿತಂತೆ ಯಾವುದೇ ಘೋಷಣೆ ಮಾಡಲಾಗುತ್ತಿಲ್ಲ,'' ಎಂದು ಸ್ಪಷ್ಟನೆ ನೀಡಲಾಗಿದೆ. 
''ನಮ್ಮ ದೇಶವು ಹಿಂದೂಗಳಿಗೆ ಸೇರಿದೆ. ನೆರೆ ರಾಷ್ಟ್ರಗಳಲ್ಲಿರುವ ಹಿಂದೂಗಳು ಮರಳಿ ಬಂದು ಭಾರತದ ಪೌರತ್ವ ಪಡೆಯುವುದರಲ್ಲಿ ತಪ್ಪೇನೂ ಇಲ್ಲ. ಈ ಸರಕಾರ ಮೊದಲ ಸಲ ಇಂತಹ ಕಾಯ್ದೆ ರೂಪಿಸಿದೆ,'' ಎಂದು ಹೇಳಿದರು. 
SCROLL FOR NEXT