ದೇಶ

ಬಿಹಾರ:ಮಾಜಿ ಸಂಸದ ಶಹಬುದ್ದೀನ್ ಸಹಚರನ ಗುಂಡಿಕ್ಕಿ ಹತ್ಯೆ

Sumana Upadhyaya

ಪಾಟ್ನಾ: ಮಾಜಿ ಮಾಫಿಯಾ ದೊರೆ ಹಾಗೂ ರಾಜಕಾರಣಿ ಮೊಹಮ್ಮದ್ ಶಹಬುದ್ದೀನ್ ನ ನಿಕಟ ಸಂಬಂಧಿ ಹಾಗೂ ಸಹಚರ ಕಳೆದ ತಡರಾತ್ರಿ ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಗುಂಡಿನ ದಾಳಿಗೆ ಹತ್ಯೆಗೀಡಾಗಿದ್ದಾನೆ.

ಇದರಿಂದ ನಗರದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ನಗರದ ಪೊಲೀಸ್ ಠಾಣೆ ಪ್ರದೇಶದಿಂದ ಅರ್ಧ ಕಿಲೋ ಮೀಟರ್ ದೂರದಲ್ಲಿ ಶಹಬುದ್ದೀನ್ ಸಹಚರ 40 ವರ್ಷದ ಮೊಹಮ್ಮದ್ ಯೂಸಫ್ ನನ್ನು ಗುಂಡಿಕ್ಕಿ ಹತ್ಯೆಗೈಯಲಾಗಿದೆ ಎಂದು ಸಿವಾನ್ ಪೊಲೀಸ್ ಸೂಪರಿಂಟೆಂಡೆಂಟ್ ನವೀನ್ ಚಂದ್ರ ಜ್ಹಾ ತಿಳಿಸಿದ್ದಾರೆ.

ಮೊಹಮ್ಮದ್ ಯೂಸಫ್ ನ ಎದೆಗೆ ಗುಂಡುಮದ್ದು ತಾಗಿ ಸ್ಥಳೀಯ ಪೊಲೀಸರು ಆಸ್ಪತ್ರೆಗೆ ಕೊಂಡೊಯ್ಯುವಾಗ ದಾರಿಮಧ್ಯೆ ಅಸುನೀಗಿದ್ದಾನೆ. ಗುಂಡಿನ ಶಬ್ದ ಕೇಳಿ ಪೊಲೀಸರು ಸ್ಥಳಕ್ಕೆ ಧಾವಿಸಿ ಬಂದಿದ್ದರು ಎಂದು ಜ್ಹಾ ತಿಳಿಸಿದ್ದಾರೆ.

ಘಟನೆ ನಡೆದ ಸ್ಥಳದಿಂದ ಕೆಲವು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ಪತ್ತೆಗೆ ಶೋಧಕಾರ್ಯ ನಡೆಸಲಾಗುತ್ತಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ವರಿಷ್ಠರು ತಿಳಿಸಿದ್ದಾರೆ.

ಸಾರ್ವಜನಿಕವಾಗಿ ಶಹಬುದ್ದೀನ್ ಪತ್ನಿ ಹಿನಾ ಶಹಬ್ ಮತ್ತು ಪುತ್ರ ಒಸಮಾ ಜೊತೆ ಕಾಣಿಸಿಕೊಳ್ಳುತ್ತಿದ್ದ ಮೊಹಮ್ಮದ್ ಯೂಸಫ್ ಶಹಬುದ್ದೀನ್ ನ ಗ್ರಾಮದವನೇ ಆಗಿದ್ದನು. ಶಹಬುದ್ದೀನ್ ನಿವಾಸ ಪಕ್ಕದಲ್ಲಿಯೇ ವಾಸವಾಗಿದ್ದನು ಎಂದು ತಿಳಿದುಬಂದಿದೆ.
ಮಾಜಿ ಸಂಸದ, ರಾಷ್ಟ್ರೀಯ ಜನತಾ ದಳ ಮುಖಂಡ ಶಹಬುದ್ದೀನ್ ಪ್ರಸ್ತುತ ತಿಹಾರ ಜೈಲಿನಲ್ಲಿದ್ದು, ಎರಡು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಎದುರಿಸುತ್ತಿದ್ದಾರೆ.

SCROLL FOR NEXT