ದೇಶ

'ಸಂವಿಧಾನ ರಕ್ಷಿಸಿ': ಪಶ್ಟಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಧರಣಿಯ ಕುರಿತು ತಿಳಿಯಬೇಕಾದ ಅಂಶಗಳು!

Srinivasamurthy VN
ಕೋಲ್ಕತಾ: ಶಾರದಾ ಚಿಟ್ ಫಂಡ್ ​ ಮತ್ತು ರೋಸ್​ ವ್ಯಾಲಿ ಪಾಂಝಿ  ಹಗರಣದ ವಿಚಾರಣೆಗೆ ಸಂಬಂಧಿಸಿದಂತೆ ಕೋಲ್ಕತಾ ಪೊಲೀಸ್ ಕಮಿಷನರ್ ಮನೆಗೆ ಮುತ್ತಿಗೆ ಹಾಕಿದ ಸಿಬಿಐ ಅಧಿಕಾರಿಗಳನ್ನು ಪಶ್ಚಿಮ ಬಂಗಾಳ ಪೊಲೀಸರು ಬಂಧಿಸುತ್ತಿದ್ದಂತೆಯೇ ಅತ್ತ ಪಶ್ಚಿಮ ಬಂಗಾಳದಲ್ಲಿ ಕೇಂದ್ರ-ರಾಜ್ಯ ಸರ್ಕಾರಗಳ ನಡುವಿನ ತಿಕ್ಕಾಟ ತಾರಕಕ್ಕೇರಿದೆ. ಅಂತೆಯೇ ಕೇಂದ್ರ ಸರ್ಕಾರದ ವಿರುದ್ದ ಸಿಎಂ ಮಮತಾ ಬ್ಯಾನರ್ಜಿ ಸಂವಿಧಾನ ರಕ್ಷಿಸಿ ಎಂಬ ಘೋಷವಾಕ್ಯದಡಿಯಲ್ಲಿ ಅಹೋರಾತ್ರಿ ಧರಣಿ ಕೂಡ ಆರಂಭಿಸಿದ್ದಾರೆ.
ಇಷ್ಟಕ್ಕೂ ಏನಿದು ದೀದಿಯ ಹೊಸ ಅವಾಂತರ, ಸಿಬಿಐ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಈ ಪರಿ ಕೋಪವೇಕೆ..?
ಈ ಹಿಂದೆ ದೆಹಲಿಯಲ್ಲಿ ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದಂತೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ರಾಜ್ಯ ಸರ್ಕಾರಕ್ಕೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಧರಣಿ ಕುಳಿತಿದ್ದರು. ಈ ವಿಚಾರ ರಾಷ್ಟ್ರವ್ಯಾಪಿ ಸುದ್ದಿಗೆ ಗ್ರಾಸವಾಗಿತ್ತು. ಕೇಂದ್ರದ ಮೋದಿ ಸರ್ಕಾರ ಲೆಫ್ಟಿನೆಂಟ್ ಗವರ್ನರ್ ಮೂಲಕ ದೆಹಲಿಯಲ್ಲಿ ತಮ್ಮ ನಿಯಂತ್ರಣ ಸಾಧಿಸಲು ಹವಣಿಸುತ್ತಿದೆ ಎಂದು ಕೇಜ್ರಿವಾಲ್ ಕಿಡಿಕಾರಿದ್ದರು. ಇದೀಗ ಅಂತಹುದೇ ಪರಿಸ್ಥಿತಿ ಪಶ್ಚಿಮ ಬಂಗಾಳದಲ್ಲೂ ನಿರ್ಮಾಣವಾಗಿದೆ ಎನ್ನಬಹುದು.
ಇನ್ನು ಈ ಹಿಂದೆ ಬಿಜೆಪಿಯೇತರ ಸರ್ಕಾರಗಳಿರುವ ಹಲವು ರಾಜ್ಯಗಳಲ್ಲಿ ಸಿಬಿಐ ಮತ್ತು ಐಟಿ ದಾಳಿಯಾಗಿತ್ತು. ಈ ದಾಳಿಯನ್ನು ಖಂಡಿಸಿದ್ದ ಹಲವು ರಾಜಕೀಯ ಮುಖಂಡರು ಕೇಂದ್ರ ಸರ್ಕಾರ ಸಿಬಿಐ ಅನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದರು. ಈ ಪೈಕಿ ಕೇಂದ್ರದ ಮೋದಿ ಸರ್ಕಾರಕ್ಕೆ ಮೊಟ್ಟ ಮೊದಲ ತಿರುಗೇಟು ನೀಡಿದ್ದು, ಆಂದ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು.
ಅಂದರೆ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ತಮ್ಮ ರಾಜ್ಯದಲ್ಲಿ ಸಿಬಿಐ ಯಾವುದೇ ತನಿಖೆ ನಡೆಸಬೇಕಾದರೂ ರಾಜ್ಯ ಪೊಲೀಸ್​ ಇಲಾಖೆಯ ಗಮನಕ್ಕೆ ತರಬೇಕು ಎಂಬ ನಿಯಮವನ್ನು ಜಾರಿಗೊಳಿಸಿದ್ದರು. ಆ ಮೂಲಕ ತಮ್ಮ ರಾಜ್ಯದಲ್ಲಿ ಸಿಬಿಐ ಪರಮಾಧಿಕಾರಕ್ಕೆ ನಾಯ್ಜು ಕೊಕ್ಕೆ ಹಾಕಿದ್ದರು. ಇದಾದ ಬಳಿಕ, ಪಶ್ಚಿಮ ಬಂಗಾಳದಲ್ಲೂ ಸಿಎಂ ಮಮತಾ ಬ್ಯಾನರ್ಜಿ ಇದೇ ನಡೆ ಅನುಸರಿಸಿದರು. ಅದರಂತೆ ಪಶ್ಚಿಮ ಬಂಗಾಳದಲ್ಲಿ ಸಿಬಿಐ ಅಧಿಕಾರಿಗಳು ಯಾವುದೇ ತನಿಖೆ ನಡೆಸಬೇಕಾದರೂ, ತಮ್ಮ ಅನುಮತಿ ಪಡೆಯಬೇಕು. ಅನುಮತಿ ಇಲ್ಲದೆ ಸಿಬಿಐ ಅಧಿಕಾರಿಗಳು ರಾಜ್ಯದಲ್ಲಿ ಯಾರ ವಿಚಾರಣೆಯನ್ನಾಗಲಿ, ದಾಳಿಯನ್ನಾಗಲಿ ನಡೆಸುವಂತಿಲ್ಲ ಎಂದು ಸೂಚನೆ ನೀಡಿದ್ದರು. 
ಸಂವಿಧಾನದಲ್ಲಿ ರಾಜ್ಯಗಳಿಗೆ ಈ ಅಧಿಕಾರವಿದೆ ಎಂಬ ನಿಯಮವಿದೆ ಎಂದೂ ಕೂಡ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ನಿನ್ನೆ ಇದ್ದಕ್ಕಿದ್ದಂತೆ ಪೊಲೀಸ್​ ಆಯುಕ್ತರ ಮನೆ ಮೇಲೆ ಸಿಬಿಐ ಅಧಿಕಾರಿಗಳು ಮುತ್ತಿಗೆ ಹಾಕಿರುವುದರಿಂದ ಪಶ್ಚಿಮ ಬಂಗಾಳದಲ್ಲಿ ಇದೀಗ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವಿನ ತಿಕ್ಕಾಟ ಆರಂಭವಾಗಿದೆ. ತಮ್ಮ ಸೂಚನೆ ಹೊರತಾಗಿಯೂ ಸಿಬಿಐ ಅಧಿಕಾರಿಗಳು ಕೋಲ್ತತಾ ಪೊಲೀಸ್ ಕಮಿಷನರ್ ಅವರ ಮನೆಗೆ ಮುತ್ತಿಗೆ ಹಾಕಿದ್ದು, ಮಮತಾ ಕೆಂಗಣ್ಣಿಗೆ ಕಾರಣವಾಗಿದೆ. 
ಕೊಲ್ಕತಾ ಪೊಲೀಸ್​ ಆಯುಕ್ತ ರಾಜೀವ್​ ಕುಮಾರ್​ ಅವರನ್ನು ವಿಚಾರಣೆ ನಡೆಸಲು 40 ಸಿಬಿಐ ಅಧಿಕಾರಿಗಳ ತಂಡ ನಿನ್ನೆ ಸಂಜೆ ತೆರಳಿತ್ತು. ಈ ವೇಳೆ ಐಪಿಎಸ್​ ಅಧಿಕಾರಿ ರಾಜೀವ್​ ಕುಮಾರ್​ ಅವರ ಮನೆಯ ಮುಂದೆ ಸಿಬಿಐ ಅಧಿಕಾರಿಗಳನ್ನು ತಡೆಯಲಾಗಿದೆ. ಬಳಿಕ, ಪೊಲೀಸರು ಮತ್ತು ಸಿಬಿಐ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಕೆಲವು ಸಿಬಿಐ ಅಧಿಕಾರಿಗಳನ್ನೇ ಬಂಧಿಸಲಾಗಿತ್ತು. ಇದೀಗ, ಬಂಧಿಸಲ್ಪಟ್ಟಿದ್ದ ಸಿಬಿಐ ಅಧಿಕಾರಿಗಳನ್ನು ಬಿಡುಗಡೆ ಮಾಡಲಾಗಿದ್ದು, ಮಮತಾ ಬ್ಯಾನರ್ಜಿ ಕೊಲ್ಕತಾ ಮೆಟ್ರೋ ಚಾನೆಲ್​ ಬಳಿ ಧರಣಿ ನಡೆಸುತ್ತಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ನಾವು ಅಧಿಕಾರಕ್ಕೆ ಬಂದಕೂಡಲೆ ಚಿಟ್ ಫಂಡ್​ ಮಾಲೀಕನನ್ನು ಬಂಧಿಸಿದ್ದೆವು. ಈ ಪ್ರಕರಣದ ತನಿಖೆಗಾಗಿ ಎಸ್​ಐಟಿಯನ್ನು ಕೂಡ ನೇಮಕ ಮಾಡಿದ್ದೆವು ಎಂದು ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಪಿಎಂ ನರೇಂದ್ರ ಮೋದಿ ಮತ್ತು ಅಮಿತ್​ ಷಾ ಷಡ್ಯಂತ್ರ ರೂಪಿಸಿದ್ದಾರೆ. ಜನವರಿ 19ರಂದು ಸುಮಾರು 20 ವಿರೋಧ ಪಕ್ಷಗಳು ಸೇರಿ ಕೇಂದ್ರ ಸರ್ಕಾರದ ವಿರುದ್ಧ ಬೃಹತ್​ ರ್ಯಾಲಿ ಆಯೋಜಿಸಿದ್ದ ಕಾರಣಕ್ಕೆ ಕೇಂದ್ರ ಸರ್ಕಾರ ಸೇಡು ತೀರಿಸಿಕೊಳ್ಳುತ್ತಿದೆ. ಇದು ರಾಜಕೀಯ ಪ್ರೇರಿತವಾದ ದಾಳಿ ಎಂದು ದೀದಿ ಆರೋಪಿಸಿದ್ದಾರೆ.
SCROLL FOR NEXT