ದೇಶ

ಏಳನೇ ದಿನಕ್ಕೆ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ, ತೂಕದಲ್ಲಿ 5 ಕೆಜಿ ಇಳಿಕೆ

Nagaraja AB

ರಾಳೇಗಣ್ ಸಿದ್ದಿ:  ಲೋಕಾಪಾಲ ನೇಮಕಕ್ಕೆ ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಏಳನೇ ದಿನಕ್ಕೆ ಕಾಲಿಟ್ಟಿದ್ದು, ಅವರ ದೇಹ ತೂಕದಲ್ಲಿ 7 ಕೆಜಿ ಇಳಿಕೆಯಾಗಿದೆ. ಆರೋಗ್ಯ ಪರಿಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಅಣ್ಣಾ ಹಜಾರೆ ಅವರ ದೇಹ ತೂಕ ಕಡಿಮೆಯಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ. ಸಕ್ಕರೆ ಅಂಶದ ಮಟ್ಟ ಕೂಡಾ ಕಡಿಮೆಯಾಗಿದೆ.ಉಪವಾಸ ಸತ್ಯಾಗ್ರಹವನ್ನು ಸ್ಥಗಿತಗೊಳಿಸುವಂತೆ  ಸಲಹೆ ನೀಡಿದ್ದೇವೆ ಎಂದು ಡಾ. ಧನಂಜಯ್ ಪೊಟ್  ತಿಳಿಸಿದ್ದಾರೆ.

ಕೇಂದ್ರದಲ್ಲಿ ಲೋಕಾಪಾಲ ಹಾಗೂ ರಾಜ್ಯಗಳಲ್ಲಿ ಲೋಕಾಯುಕ್ತರ ನೇಮಕಕ್ಕೆ ಆಗ್ರಹಿಸಿ ಜನವರಿ 30 ರಿಂದ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

ವೈದ್ಯರು ನೀಡಿದ ಓಆರ್ ಎಸ್ ಅಥವಾ ಸಲೈನ್ ತೆಗೆದುಕೊಳ್ಳಲು 81 ವರ್ಷದ ಅಣ್ಣಾ ಹಜಾರೆ ನಿರಾಕರಿಸುತ್ತಿದ್ದಾರೆ. ಅವರು ಹೀಗೆಯೇ ಉಪವಾಸ ಸತ್ಯಾಗ್ರಹ ಮುಂದುವರೆಸಿದರೆ ಕಿಡ್ನಿಗಳು ಹಾಗೂ ಮೆದಳಿಗೆ ತೊಂದರೆಯಾಗಲಿದೆ ಎಂದು ವೈದ್ಯರು ಹೇಳಿದ್ದಾರೆ.

ಅಣ್ಣಾ ಹಜಾರೆ ಜೊತೆಗೆ ಇಡೀ ಹಳ್ಳಿಯ ಜನರು ಕೂಡಾ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ಯಾರೊಬ್ಬರೂ ಅಡುಗೆ ಮಾಡುತ್ತಿಲ್ಲ. ಅಣ್ಣಾ ಹಜಾರೆ  ಅವರ ಬೇಡಿಕೆಗಳು ಈಡೇರದಿದ್ದಲ್ಲಿ ಎಲ್ಲರೂ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು  ರಾಳೇಗಣ್ ಸಿದ್ದಿಯ ಉಪ ಮುಖಂಡ ಲಂಕೇಶ್ ಅವುಟಿ ಹೇಳಿದ್ದಾರೆ.

 ಕೇಂದ್ರ ಸರ್ಕಾರದ ಪರ ರಕ್ಷಣಾ ಖಾತೆ ರಾಜ್ಯ ಸಚಿವ ಸುಭಾಷ್ ಬಾಮ್ರೆ ಹಾಗೂ ರಾಜ್ಯ ಸರ್ಕಾರ ಪರ ಗಿರೀಶ್ ಮಹಾಜನ್  ಸೋಮವಾರ ಅಣ್ಣಾ ಹಜಾರೆ ಅವರನ್ನು ಭೇಟಿ ಮಾಡಿ  ಉಪವಾಸ ಸತ್ಯಾಗ್ರಹ ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.

ಆದರೆ, ಕೇಂದ್ರ ಸರ್ಕಾರ ಜನರನ್ನು ಹಾದಿ ತಪ್ಪಿಸುತ್ತಿದ್ದು, ಪ್ರತಿಭಟನೆಯನ್ನು ಮುಂದುವರೆಸುವುದಾಗಿ ಅಣ್ಣಾ ಹಜಾರೆ ಹೇಳಿದ್ದಾರೆ.

SCROLL FOR NEXT