ನವದೆಹಲಿ: ಕಾನೂನಾತ್ಮಕವಾಗಿ ಮತ್ತು ತಾಂತ್ರಿಕವಾಗಿ ಆಧಾರ್ ಬಯೋಮೆಟ್ರಿಕ್ ಅನ್ನು ಬಳಸಿ ಮೃತ ವ್ಯಕ್ತಿಗಳನ್ನು ಗುರುತಿಸಲು ಸಾಧ್ಯವಿಲ್ಲ ಎಂದು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ(ಯುಐಡಿಎಐ) ಮಂಗಳವಾರ ದೆಹಲಿ ಹೈಕೋರ್ಟ್ ಗೆ ತಿಳಿಸಿದೆ.
ಆಧಾರ್ ಬಯೋಮೆಟ್ರಿಕ್ ಬಳಸಿ ಮೃತದೇಹಗಳನ್ನು ಪತ್ತೆ ಹಚ್ಚುವುದು ಆಧಾರ್ ಕಾಯ್ದೆಗೆ ವಿರುದ್ಧವಾಗಿದೆ ಎಂದು ಯುಐಡಿಎಐ ಮುಖ್ಯ ನ್ಯಾಯಮೂರ್ತಿ ರಾಜೇಂದ್ರ ಮೆನನ್ ಹಾಗೂ ನ್ಯಾಯಮೂರ್ತಿ ವಿ ಕೆ ರಾವ್ ಅವರನ್ನೊಳಗೊಂಡ ಪೀಠಕ್ಕೆ ಸ್ಪಷ್ಟಪಡಿಸಿದೆ.
ಆಧಾರ್ ಕಾಯ್ದೆಯಲ್ಲಿ ನಿಗದಿಪಡಿಸಿದ ವಿಷಯದ ಹೊರತಾಗಿ ಇತರೆ ಯಾವುದೇ ಉದ್ದೇಶಕ್ಕೂ ಆಧಾರ್ ಬಳಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಕಳೆದ ವರ್ಷ ತೀರ್ಪು ನೀಡಿದೆ ಎಂದು ಯುಐಡಿಎಐ ಪರ ವಕೀಲ ಜೋಹೆಬ್ ಹುಸ್ಸೇನ್ ಅವರು ಹೇಳಿದರು.
ಈ ವೇಳೆ ಅರ್ಜಿದಾರ ಅಮಿತ್ ಶಹ್ನಿ ಅವರು, ಕಳೆದಕೊಂಡ ಮಕ್ಕಳನ್ನು ಹುಡುಕಲು ಆಧಾರ್ ಬಳಸಲಾಗುತ್ತಿದ್ದು, ಗುರುತುಸಿಗದ ದೇಹಗಳನ್ನು ಪತ್ತೆಹಚ್ಚಲು ಆಧಾರ್ ಬಳಸಲು ಅವಕಾಶ ನೀಡಬೇಕು ಎಂದು ವಾದಿಸಿದರು.
ಶಹ್ನಿ ವಾದ ಆಲಿಸಿದ ಕೋರ್ಟ್, ಈ ಬಗ್ಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಯುಐಡಿಎಐಗೆ ಸೂಚಿಸಿ, ವಿಚಾರಣೆಯನ್ನು ಏಪ್ರಿಲ್ 23ಕ್ಕೆ ಮುಂದೂಡಿದೆ.