ದೇಶ

ಕೋಲ್ಕತಾ ಪೊಲೀಸರ ನೋಟಿಸ್​ಗೆ ಉತ್ತರಿಸುವ ಮುನ್ನ ಕಾನೂನು ತಜ್ಞರ ಸಲಹೆ ಪಡೆಯುತ್ತೇವೆ: ಸಿಬಿಐ

Srinivasamurthy VN
ಕೋಲ್ಕತಾ: ಪಶ್ಚಿಮ ಬಂಗಾಳದ ಪೊಲೀಸರು ಸಿಬಿಐ ಅಧಿಕಾರಿ ಪಂಕಜ್ ಕುಮಾರ್​ ಶ್ರೀವಾಸ್ತವ್ ಅವರಿಗೆ ನೀಡಿರುವ ನೋಟಿಸ್ ಗೆ ಕಾನೂನು ತಜ್ಞರನ್ನು ಸಂಪರ್ಕಿಸಿ ಬಳಿಕ ಉತ್ತರ ನೀಡುತ್ತೇವೆ ಎಂದು ಸಿಬಿಐ ಸ್ಪಷ್ಟಪಡಿಸಿದೆ.
ಸಿಬಿಐಗೆ ತಿರುಗು ಬಾಣ​ ಹೂಡಿರುವ ಪಶ್ಚಿಮ ಬಂಗಾಳ ಪೊಲೀಸರು ಕೊಲ್ಕತಾದ ಸಿಬಿಐ ಮುಖ್ಯಸ್ಥ ಪಂಕಜ್ ಕುಮಾರ್​ ಶ್ರೀವಾಸ್ತವ್​ ಅವರಿಗೆ ನೋಟಿಸ್​ ಜಾರಿಗೊಳಿಸಿದ್ದಾರೆ. 2018ರಲ್ಲಿ ಇಬ್ಬರು ಉದ್ಯಮಿಗಳನ್ನು ಅನಧಿಕೃತವಾಗಿ ವಶದಲ್ಲಿಟ್ಟುಕೊಂಡಿದ್ದ ಮತ್ತು ಕಟ್ಟಿಹಾಕಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಶ್ರೀವಾಸ್ತವ್​ ಅವರಿಗೆ ನೋಟಿಸ್​ ಜಾರಿ ಮಾಡಲಾಗಿದೆ. ಇದೀಗ ಈ ನೋಟಿಸ್ ಸಂಬಂಧ ಪ್ರತಿಕ್ರಿಯೆ ನೀಡಿರುವ ಕೋಲ್ಕತಾ ಸಿಬಿಐ ಮುಖ್ಯಸ್ಥ ಪಂಕಜ್ ಕುಮಾರ್​ ಶ್ರೀವಾಸ್ತವ್ ಅವರು, 'ನೋಟಿಸ್​ಗೆ ಉತ್ತರಿಸುವ ಮುನ್ನ ಕಾನೂನು ತಜ್ಞರ ಸಲಹೆ ಪಡೆಯುವುದಾಗಿ ತಿಳಿಸಿದ್ದಾರೆ. 
ನಾನು ಗೃಹ ಬಂಧನದಲ್ಲಿದ್ದೇನೆ, ಪೊಲೀಸರು ಯಾವಾಗ ಬೇಕಿದ್ದರೂ ಬಂಧಿಸಬಹುದು!
ನಿನ್ನೆ ಘಟನೆ ನಡೆದ ನಂತರ ಪ್ರತಿಕ್ರಿಯೆ ನೀಡಿದ್ದ ಶ್ರೀವಾಸ್ತವ್​, 'ಯಾವ ಸಮಯದಲ್ಲಿ ಬೇಕಾದರೂ ಇಲ್ಲಿನ ಸ್ಥಳೀಯ ಪೊಲೀಸರು ನನ್ನನ್ನು ಬಂಧಿಸಬಹುದು. ಮನೆಯ ಸುತ್ತ 40ಕ್ಕೂ ಹೆಚ್ಚು ಪೊಲೀಸರು ಸೇರಿದ್ದಾರೆ. ನನ್ನದೇ ಮನೆಯೊಳಗೆ ನಾನು ಖೈದಿಯಂತೆ ಬಂಧಿಸಲ್ಪಟ್ಟಿದ್ದೇನೆ. ನನ್ನ ಕುಟುಂಬದವರು ಗಾಬರಿಗೊಂಡಿದ್ದಾರೆ, ಮನೆಯಲ್ಲಿ ಚಿಕ್ಕ ಮಗಳು ಮತ್ತು ಹೆಂಡತಿ ಇದ್ದಾರೆ. ಅವರಿಗೆ ನನ್ನ ಸುರಕ್ಷತೆಯ ಬಗ್ಗೆ ಚಿಂತೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
'ಸುಪ್ರೀಂಕೋರ್ಟ್​ ಸೂಚನೆಯಂತೆ ನಾವು ರೋಸ್ ವ್ಯಾಲಿ ಮತ್ತು ಶರದಾ ಚಿಟ್ ಫಂಡ್​ ಹಗರಣದ ತನಿಖೆ ನಡೆಸಲು ಸಾಧ್ಯವಾಗದಿದ್ದರೆ ಬೇರೆ ಪ್ರಕರಣಗಳಲ್ಲಿ ನಾವು ನಮ್ಮ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸುತ್ತೇವೆ ಎಂಬ ನಂಬಿಕೆಯನ್ನೇ ಕಳೆದುಕೊಳ್ಳುತ್ತೇವೆ. ಹೀಗಾಗಿ, ಈ ವಿಷಯದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು. ನಾನು ಈ ಬಗ್ಗೆ ನಮ್ಮ ಉಸ್ತುವಾರಿ ನಿರ್ದೇಶಕರಿಗೆ ಮಾಹಿತಿ ನೀಡಿದ್ದೇನೆ ಎಂದು ಶ್ರೀವಾಸ್ತವ್​ ಹೇಳಿದ್ದಾರೆ. ಅಂತೆಯೇ ಶ್ರೀವಾಸ್ತವ್​ ಅವರು ದೆಹಲಿಯ ಸಿಬಿಐ ಮುಖ್ಯಸ್ಥರನ್ನು ಭೇಟಿಯಾಗಲು ತೆರಳಿದ್ದಾರೆ ಎನ್ನಲಾಗಿದೆ.
SCROLL FOR NEXT