ದೇಶ

ಅಕ್ರಮ ಆಸ್ತಿ: ವಾದ್ರಾ ಎರಡನೇ ದಿನದ ವಿಚಾರಣೆ ಅಂತ್ಯ

Raghavendra Adiga
ನವದೆಹಲಿ: ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿಯ ಸೋದರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ ಅವರನ್ನು ಎರಡನೇ ದಿನ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ವಿದೇಶಗಳಲ್ಲಿ ಅಕ್ರಮ ಆಸ್ತಿ, ಅಕ್ರಮ ಹಣ ವರ್ಗಾವಣೆ ಆರೋಪದ ಹಿನ್ನೆಲೆಯಲ್ಲಿ ಇಡಿ ಈ ವಿಚಾರಣೆ ನಡೆಸಿದೆ.ಆರು ಗಂಟೆಗಳ ಕಾಲ ಅವರು ವಾದ್ರಾ ಅವರನ್ನು ಪ್ರಶ್ನಿಸಿದ್ದಾರೆ.
ವಾದ್ರಾ ರಾತ್ರಿ 9.30ರ ಸುಮಾರಿಗೆ ವಿಚಾರಣೆ ಪೂರ್ಣಗೊಳಿಸಿ ಇಡಿ ಕಛೇರಿಯಿಂದ ಹೊರಬಂದಿದ್ದಾರೆ. ಅಷ್ಟರಲ್ಲಿ ಅಲ್ಲಿ ಹಾಜರಿದ್ದ ಪ್ರಿಯಾಂಕಾ ಗಾಂಧಿ ತಮ್ಮ ಪತಿ ವಾದ್ರಾರನ್ನು ತಮ್ಮ ಕಾರಿನಲ್ಲೇ ಕುಳ್ಳರಿಸಿಕೊಂಡು ತೆರಳುವ ಮೂಲಕ ತಮ್ಮ ನೈತಿಕ ಬೆಂಬಲ ಸೂಚಿಸಿದ್ದಾರೆ.
ಯುನೈಟೆಡ್ ಕಿಂಗ್ ಡಮ್ ನಲ್ಲಿ ಸ್ಥಿರಾಸ್ತಿಗಳನ್ನು  ಸ್ವಾಧೀನಪಡಿಸಿಕೊಂಡಿರುವುದರ ಕುರಿತು ಹೆಚ್ಚಿನ ಪ್ರಶ್ನೆಗಳಿಗೆ ಉತ್ತರಿಸಲು ಅಗತ್ಯವಿರುವ ಕಾರಣ ವಾದ್ರಾ  ಗುರುವಾರ ಮತ್ತೆ ತನಿಖೆಗೆ ಆಗಮಿಸಬೇಕೆಂದು ಇಡಿ ಸೂಚಿಸಿತ್ತು. 
ಇದಕ್ಕೆ ಮುನ್ನ ನಿನ್ನೆ (ಬುಧವಾರ) ಸಹ ವಾದ್ರಾ ಅವರ ವಿಚಾರಣೆ ನಡೆದ್ತ್ತು. ಅದಾಗ ಸುಮಾರು ಐದೂವರೆ ತಾಸು ವಿಚಾರಣೆ ನಡೆದಿದ್ದು ಆಗಲೂ ಪ್ರಿಯಾಂಕಾ ಅವರೇ ವಾದ್ರಾರನ್ನು ಇಡಿ ಕಛೇರಿಯ ಬಳಿ ಬಿಟ್ಟು ತೆರಳಿದ್ದರು.
ಸಂಜಯ್ ಭಂಡಾರಿ ಅವರೊಂದಿಗೆ ಸಂಬಂಧ ಸೇರಿದಂತೆ ಅನೇಕ ವಿಚಾರದ ಕುರಿತು ವಾದ್ರಾರನ್ನು ಪ್ರಶ್ನಿಸಲಾಗಿದೆ ಎಂದು ಮೂಲಗಳು ಹೇಳಿದೆ.ವದ್ರಾ ಅವರು ಪ್ರಕರಣದ ತನಿಖಾಧಿಕಾರಿಗಳೊಂದಿಗೆ ದಾಖಲೆಗಳನ್ನು ಹಂಚಿಕೊಂಡಿದ್ದಾರೆ  ಎನ್ನಲಾಗಿದೆ.
ಈ ನಡುವೆ ವಾದ್ರಾ ಪರ ವಕೀಲರಾದ ಕೆಟಿಎಸ್​ ತುಳಸಿ, "ಇಡಿ ಅಧಿಕಾರಿಗಳು ತನಿಖೆಯ ಮಾಹಿತಿಯನ್ನು ಸೋರಿಕೆ ಮಾಡುತ್ತಿದ್ದಾರೆ" ಎಂದು ಆರೋಪಿಸಿದ್ದಾರೆ.
SCROLL FOR NEXT