ಕೋಲ್ಕತಾ: ಇತ್ತೀಚಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಧರಣಿಯಲ್ಲಿ ಭಾಗವಹಿಸಿದ್ದ ರಾಜ್ಯದ ಐವರು ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ, ಅವರಿಗೆ ನೀಡಿದ ಪದಕಗಳನ್ನು ಹಿಂಪಡೆಯುವ ಸಾಧ್ಯತೆ ಇದೆ.
ಈ ಕುರಿತು ಇಂದು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಸಿಎಂ ಮಮತಾ ಬ್ಯಾನರ್ಜಿ ಅವರು, ಕೇಂದ್ರ ಸರ್ಕಾರ ಒಂದು ವೇಳೆ ಐವರು ಅಧಿಕಾರಿಗಳಿಗೆ ನೀಡಿದ ಪದಕಗಳನ್ನು ಹಿಂಪಡೆದರೆ, ನಾನು ಅವರಿಗೆ ರಾಜ್ಯದ ಅತ್ಯುನ್ನತ ಪ್ರಶಸ್ತಿಯಾದ 'ಬಂಗಬಿಭೂಷಣ' ನೀಡುತ್ತೇನೆ ಎಂದಿದ್ದಾರೆ.
ಪೊಲೀಸರು ಅಧಿಕಾರಿಗಳು ನಮ್ಮ ಧರಣಿಯಲ್ಲಿ ಭಾಗಿಯಾಗಿಲ್ಲ. ಅವರು ನಮ್ಮ ಭದ್ರತೆಗಾಗಿ ಸ್ಥಳದಲ್ಲಿ ಹಾಜರಿದ್ದರು ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಫೆಬ್ರವರಿ 4ರಂದು ಶಾರದಾ ಚಿಟ್‌ಫಂಡ್ ಹಗರಣದಲ್ಲಿ ಕೋಲ್ಕೊತಾ ಪೊಲೀಸ್ ಆಯುಕ್ತರನ್ನು ವಿಚಾರಣೆಗೆ ಒಳಪಡಿಸಲು ಬಂದ ಸಿಬಿಐ ವಿರುದ್ಧಮಮತಾ ಬ್ಯಾನರ್ಜಿ ಧರಣಿ ನಡೆಸಿದ್ದರು.
ಧರಣಿಯಲ್ಲಿ ಭಾಗಿಯಾದ ರಾಜ್ಯದ ಪೊಲೀಸ್ ಮಹಾ ನಿರ್ದೇಶಕ ವೀರೇಂದ್ರ, ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ವಿನೀತ್‌ಕುಮಾರ್ ಗೋಯಲ್, ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಅನುಜ್ ಶರ್ಮಾ, ಬಿಧಾನ್‌ನಗರ ಕಮಿಷನರೇಟ್‌ನ ಪೊಲೀಸ್ ಆಯುಕ್ತ ಗ್ಯಾನವಂತ್ ಸಿಂಗ್ ಮತ್ತು ಹೆಚ್ಚುವರಿ ಪೊಲೀಸ್ ಆಯುಕ್ತ (ಕೋಲ್ಕೊತಾ) ಸುಪ್ರತಿಮ್ ದರ್ಕಾರ್ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸೂಚನೆ ನೀಡಿದೆ. ಆದರೆ ಇಂತಹ ಯಾವುದೇ ನಿರ್ದೇಶನ ಕೇಂದ್ರದಿಂದ ಬಂದಿಲ್ಲ, ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.