ಗಾಂಧಿನಗರ: ಕಾಂಗ್ರೆಸ್ ಪಕ್ಷವು ಜಾತಿ ಜಾತಿಗಳ ನಡುವೆ ವೈರತ್ವ ತರುತ್ತಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಮೀಸಲಾತಿ ತರುವ ಮೂಲಕ ಜಾತಿಗಳನ್ನು ಒಗ್ಗೂಡಿಸುತ್ತಿದ್ದಾರೆ ಎಂದು ಹೇಳಿ ಗುಜರಾತ್ ನ ಕಾಂಗ್ರೆಸ್ ಶಾಸಕಿ ಆಶಾ ಪಟೇಲ್ ಶಾಸಕಿ ಸ್ಥಾನ ಹಾಗೂ ಪಕ್ಷಕ್ಕೆ ರಾಜೀನಾಮೆ ನೀಡಿದ್ದು ಇದರ ಬೆನ್ನಲ್ಲೇ ತಮ್ಮ 22 ಬೆಂಬಲಿಗರೊಂದಿಗೆ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಲೋಕಸಭೆ ಚುನಾವಣೆ ಬೆನ್ನಲ್ಲೇ ಕಾಂಗ್ರೆಸ್ ದೊಡ್ಡ ಸಂಕಷ್ಟ ಎದುರಾಗಿದ್ದು ಕೈ ಶಾಸಕಿ ಆಶಾ ಪಟೇಲ್ ತಮ್ಮ 22 ಬೆಂಬಲಿಗರೊಂದಿಗೆ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಕಾಂಗ್ರೆಸ್ ಪಕ್ಷದೊಳಗಿನ ಗುಂಪುಗಾರಿಕೆ ಹಾಗೂ ಒಳಜಗಳದಿಂದ ಬೇಸತ್ತು ತಾವು ಪಕ್ಷಕ್ಕೆ ರಾಜಿನಾಮೆ ನೀಡುವುದಾಗಿ ಆಶಾ ಪಟೇಲ್ ಹೇಳಿದ್ದರು. ಅಲ್ಲದೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಪತ್ರ ಬರೆದಿದ್ದರು.
ಆಶಾ ಪಟೇಲ್ ಅವರು ಮೆಹ್ಸಾನಾ ಜಿಲ್ಲೆಯ ಉಂಝಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಮೋದಿ ಅವರ ಹುಟ್ಟೂರಾದ ವಡನಗರವು ಇದೇ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. 2017ರಲ್ಲಿ ನಡೆದ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 99 ಸ್ಥಾನಗಳನ್ನು ಗೆದ್ದ ಸರಳ ಬಹುಮತದೊಂದಿಗೆ ಸರ್ಕಾರ ರಚಿಸಿತ್ತು.