ದೇಶ

ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಎಲ್ಲ ಅಕ್ರಮ ವಲಸಿಗರೂ ತಮ್ಮ ತವರು ಸೇರಲಿದ್ದಾರೆ: ಅಮಿತ್ ಶಾ

Srinivasamurthy VN
ಮಹಾರಾಜ ಗಂಜ್: ಬಿಜೆಪಿ ಪಕ್ಷ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಎಲ್ಲ ಅಕ್ರಮ ವಲಸಿಗರೂ ತಮ್ಮ ತಮ್ಮ ತವರು ಸೇರಲಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಉತ್ತರ ಪ್ರದೇಶದ ಮಹಾರಾಜ ಗಂಜ್ ನಲ್ಲಿ ನಡೆದ ಕಾರ್ಯರ್ತರ ಸಭೆಯಲ್ಲಿ ಮಾತನಾಡಿದ ಅಮಿತ್ ಶಾ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ದೇಶದ ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಎಲ್ಲ ಅಕ್ರಮ ವಲಸಿಗರೂ ತಮ್ಮ ತಮ್ಮ ತವರು ಸೇರಲಿದ್ದಾರೆ ಎಂದು ಹೇಳಿದರು. ಅಂತೆಯೇ ಅಕ್ರಮ ವಲಸಿಗರೇ ಎಸ್ ಪಿ, ಬಿಎಸ್ ಪಿ ಪಕ್ಷಗಳ ಮತ ಬ್ಯಾಂಕ್ ಆಗಿದ್ದು ಇದೇ ಕಾರಣಕ್ಕೆ ಈ ಪಕ್ಷಗಳು ಅವರ ರಕ್ಷಣೆಗೆ ಮುಂದಾಗುತ್ತಿದ್ದು, ಎನ್ ಆರ್ ಸಿಗೆ ವಿರೋಧ ವ್ಯಕ್ತಪಡಿಸುತ್ತಿವೆ ಎಂದು ಹೇಳಿದರು.
ಅಸ್ಸಾಂ ನಲ್ಲಿ ನಡೆದ ರಾಷ್ಟ್ರೀಯ ನಾಗರೀಕ ನೋಂದಣಿ ಪ್ರಕ್ರಿಯೆಯಲ್ಲಿ ಸುಮಾರು 40 ಲಕ್ಷಕ್ಕೂ ಅಧಿಕ ಅಕ್ರಮ ವಲಸಿಗರು ಸಿಕ್ಕಿಬಿದ್ದಿದ್ದಾರೆ. ಈಗಾಗಲೇ ಅವರನ್ನು ದೇಶದಿಂದ ಕಳುಹಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೆ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಖಂಡಿತಾ ದೇಶದ ಉದ್ದಗಲಕ್ಕೂ ಇರುವ ಅಕ್ರಮ ವಲಸಿಗರನ್ನು ದೇಶದಿಂದ ಹೊರಹಾಕುತ್ತೇವೆ ಎಂದು ಶಾ ಹೇಳಿದರು.
ಇದೇ ವೇಳೆ ಮಾಯಾವತಿ ಮತ್ತು ಅಖಿಲೇಶ್ ವಿರುದ್ಧ ವಾಗ್ದಾಳಿ ನಡೆಸಿದ ಶಾ, ತಮ್ಮ ಮತ ಬ್ಯಾಂಕ್ ಭದ್ರಪಡಿಸಿಕೊಳ್ಳಲು ಎಸ್ ಪಿ ಮತ್ತು ಬಿಎಸ್ ಪಿ ಎನ್ ಆರ್ ಸಿಗೆ ವಿರೋಧ ವ್ಯಕ್ತಪಡಿಸುತ್ತಿವೆ. ಆದರೆ ನಮ್ಮ ಪಾಲಿಗೆ ಮತ ಬ್ಯಾಂಕ್ ಗಿಂತ ದೇಶದ ಭದ್ರತೆಯೇ ಮುಖ್ಯ ಎಂದು ಹೇಳಿದರು. ಅಂತೆಯೇ ರಾಮ ಮಂದಿರ ವಿವಾದದ ಕುರಿತು ಮಾತನಾಡಿದ ಶಾ, ರಾಮಮಂದಿರ ನಿರ್ಮಾಣಕ್ಕೆ ಬಿಜೆಪಿ ಬದ್ಧವಾಗಿದ್ದು, ಈ ಹಿಂದೆ ಇದ್ದ ಅದೇ ಹಳೆಯ ಸ್ಥಳದಲ್ಲೇ ಮಂದಿರ ನಿರ್ಮಾಣವಾಗಲಿದೆ ಎಂದು ಭರವಸೆ ನೀಡಿದರು.
SCROLL FOR NEXT