ನವದೆಹಲಿ: ಜಸ್ಟ್ ಪಿಯು (12th) ಪಾಸ್ ಆದ ವ್ಯಕ್ತಿಯನ್ನು ಮತ್ತೆ ಪ್ರಧಾನಿಯಾಗಿ ಆಯ್ಕೆ ಮಾಡಬೇಡಿ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವ್ಯಂಗ್ಯವಾಡಿದ್ದಾರೆ.
ಜಂತರ್ ಮಂತರ್ ನಲ್ಲಿ ನಡೆದ ಮಮತಾ ಬ್ಯಾನರ್ಜಿ ಅವರ ನೇತೃತ್ವದ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಕೇಜ್ರಿವಾಲ್, ಕಳೆದ ಬಾರಿ 12ನೇ ತರಗತಿ ಪಾಸಾದ ವ್ಯಕ್ತಿಯನ್ನು ಪ್ರಧಾನಿ ಹುದ್ದೆಯಲ್ಲಿ ಕೂರಿಸಿದಿರಿ. ಅದರ ಪರಿಣಾಮ ಏನಾಗಿದೆ ಎಂದು ಇಡೀ ದೇಶಕ್ಕೇ ತಿಳಿದಿದೆ. ಪ್ರಧಾನಿ ಹುದ್ದೆ ಎಂಬುದು ತುಂಬಾ ಪ್ರಮುಖ ಸ್ಥಾನ. ಅತ್ಯುತ್ತಮ ವ್ಯಕ್ತಿಗಳು, ಉನ್ನತ ಶಿಕ್ಷಣ ಹೊಂದಿರುವವರನ್ನು ಆ ಹುದ್ದೆಗೆ ಆಯ್ಕೆ ಮಾಡಬೇಕಿದೆ. ಆದರೆ ಕಳೆದ ಬಾರಿ 12ನೇ ತರಗತಿ ಪಾಸಾದ ವ್ಯಕ್ತಿಯನ್ನು (ನರೇಂದ್ರ ಮೋದಿ) ಆ ಜಾಗಕ್ಕೆ ಆಯ್ಕೆ ಮಾಡಲಾಗಿದೆ.
ಆ ವ್ಯಕ್ತಿಗೆ ಯಾವ ಯಾವ ಕಡತಗಳಿಗೆ ಸಹಿ ಹಾಕಬೇಕು ಎಂಬ ಕನಿಷ್ಠ ಜ್ಞಾನ ಕೂಡ ಇಲ್ಲ. ಅದಕ್ಕಿಂದ ದೊಡ್ಡ ಸಮಸ್ಯೆ ಎಂದರೆ ಆ ವ್ಯಕ್ತಿ ಕಡತಗಳಿಗೆ ಸಹಿ ಹಾಕುವ ಮುನ್ನ ಹಿರಿಯ ಅಧಿಕಾರಿಗಳನ್ನು ಸಂಪರ್ಕ ಕೂಡ ಮಾಡುವುದಿಲ್ಲ. ತಮಗೆ ಏನು ಬೇಕು ಅದನ್ನು ಮಾಡುತ್ತಿದ್ದಾರೆ. ಜನತೆಯ ಆಶೋತ್ತರಗಳಿಗೆ ಅವರ ಬಳಿ ಬೆಲೆಯೇ ಇಲ್ಲದಂತಾಗಿದೆ ಎಂದು ಹೇಳಿದರು.
ಇದೇ ವೇಳೆ ಮಮತಾ ಮತ್ತು ಕೇಂದ್ರ ಸರ್ಕಾರದ ನಡುವಿನ ತಿಕ್ಕಾಟದ ಕುರಿತು ಮಾತನಾಡಿದ ಕೇಜ್ರಿವಾಲ್, ಕೇಂದ್ರ ಸರ್ಕಾರ ಅಂಬೇಡ್ಕರ್ ರಚಿತ ಸಂವಿಧಾನವನ್ನೇ ನಾಶ ಮಾಡಲು ಹೊರಟಿದೆ. ಅದರ ಪರಿಣಾಮವೇ ಸಂವಿಧಾನ ಬದ್ಧ ಪಶ್ಚಿಮ ಬಂಗಾಳ ಸರ್ಕಾರದ ಮೇಲಿನ ದಾಳಿ ಸ್ಪಷ್ಟ ಉದಾಹರಣೆಯಾಗಿದೆ. ಒಂದು ವೇಳೆ ಅಂದು ಕೋಲ್ಕತಾ ಪೊಲೀಸ್ ಆಯುಕ್ತರ ಬಂಧನವಾಗಿದ್ದರೆ, ಇಡೀ ದೇಶಕ್ಕೆ ತಪ್ಪು ಸಂದೇಶ ರವಾನೆಯಾಗುತ್ತಿತ್ತು. ಕೇಂದ್ರ ಸರ್ಕಾರದ ಹಿಟ್ಲರ್ ಆಡಳಿತದಿಂದಾಗಿ ಇಡೀ ದೇಶದ ಇತರೆ ರಾಜ್ಯಗಳ ಪೊಲೀಸರು ಆತಂಕಕ್ಕೀಡಾಗಬೇಕಾಗುತ್ತಿತ್ತು. ಅಂಬೇಡ್ಕರ್ ಅವರು ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆಯೂ ಸೇರಿದಂತೆ ರಾಜ್ಯ ಸರ್ಕಾರದ ಅಧೀನ ಸಂಸ್ಥೆಗಳಿಗೆ ಕೆಲ ಅಧಿಕಾರಗಳನ್ನು ನೀಡಿದ್ದಾರೆ. ಅವುಗಳನ್ನು ಗಾಳಿಗೆ ತೂರಿ ಮೋದಿ ಸರ್ಕಾರ ತಮ್ಮ ಹಿತಾಸಕ್ತಿ ಸಾಧನೆಗೆ ಮುಂದಾಗಿದೆ. ಆದರೆ ನರೇಂದ್ರ ಮೋದಿ ಅವರ ಕಾರ್ಯಕ್ಕೆ ಅಡ್ಡಗೋಡೆಯಾಗಿ ನಿಂತ ಮಮತಾ ಅವರ ಧೈರ್ಯಕ್ಕೆ ನಾನು ಸೆಲ್ಯೂಟ್ ಹೇಳುತ್ತೇನೆ. ಅವರ ದಿಟ್ಟ ಕ್ರಮದಿಂದ ಪೊಲೀಸ್ ಇಲಾಖೆಯ ಗೌರವ ರಕ್ಷಣೆಯಾಗಿದೆ ಎಂದು ಕೇಜ್ರಿವಾಲ್ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics