ದೇಶ

ಉತ್ತಮ ನಡವಳಿಕೆ: ಪಾಕ್ ನಲ್ಲಿ ಜೈಲು ಪಾಲಾಗಿದ್ದ ಅಸ್ಸಾಂ ಮೂಲದ ಯುವಕನ ಬಿಡುಗಡೆ

Srinivasamurthy VN
ಇಸ್ಲಾಮಾಬಾದ್: ಆಕಸ್ಮಿಕವಾಗಿ ಗಡಿ ದಾಟಿ ಪಾಕಿಸ್ತಾನಕ್ಕೆ ಹೋಗಿ ಜೈಲು ಪಾಲಾಗಿದ್ದ ಅಸ್ಸಾಂ ಮೂಲದ ಯುವಕನನ್ನು ಆತನ ಉತ್ತಮ ನಡವಳಿಕೆ ಆಧಾರದ ಮೇಲೆ ಪಾಕಿಸ್ತಾನ ಸರ್ಕಾರ ಬಿಡುಗಡೆ ಮಾಡಿದೆ.
ಕಳೆದ ವರ್ಷ ಆಗಸ್ಟ್ ನಲ್ಲಿ ಅಸ್ಸಾಂ ಮೂಲದ ಸುಮಾರು 16 ವರ್ಷದ ಬಿಮಲ್ ನರ್ಜರೆ ಆಕಸ್ಮಿಕವಾಗಿ ಪಾಕಿಸ್ತಾನ ಗಡಿ ಪ್ರವೇಶ ಮಾಡಿದ್ದ. ಕೂಡಲೇ ಅಲ್ಲಿ ಪಹರೆ ಕಾಯುತ್ತಿದ್ದ ಪಾಕಿಸ್ತಾನ ಸೇನೆಯ ರೇಂಜರ್ಸ್ ಈತನನ್ನು ಬಂಧಿಸಿತ್ತು. ಈ ಸಂಬಂಧ ಪಾಕಿಸ್ತಾನದ ಅಧಿಕಾರಿಗಳು ಭಾರತೀಯ ಅಧಿಕಾರಿಗಳಿಗೆ ಮಾಹಿತಿ ಕೂಡ ನೀಡಿದ್ದರು. ಇದೀಗ ಈ ಯುವಕನನ್ನು ಉತ್ತಮ ನಡವಳಿಕೆ ಆಧಾರದ ಮೇಲೆ ಪಾಕಿಸ್ತಾನ ಸರ್ಕಾರ ಬಿಡುಗಡೆ ಮಾಡಿದೆ.
ಇನ್ನು ವರ್ಷಕ್ಕೆ 2 ಬಾರಿ ಭಾರತ ಮತ್ತು ಪಾಕಿಸ್ತಾನ ದೇಶಗಳು ತಾವು ಬಂಧಿಸಿದ ಪರಸ್ಪರ ದೇಶದ ನಾಗರೀಕರ ಪಟ್ಟಿಯನ್ನು ಹಂಚಿಕೊಳ್ಳುತ್ತದೆ. ಅದರಂತೆ ಜನವರಿ 1 ಹಾಗೂ ಜುಲೈ 1 ರಂದು ಬಂಧನಕ್ಕೀಡಾದ ಮೀನುಗಾರರ ಮತ್ತು ನಾಗರೀಕರ ಕುರಿತು ಮಾಹಿತಿ ಹಂಚಿಕೊಳ್ಳುತ್ತದೆ. ಉಭಯ ದೇಶಗಳ ನಡುವೆ 2008ರಲ್ಲಿ ಈ ಮಹತ್ವದ ಒಪ್ಪಂದವಾಗಿತ್ತು. 
ಅಂತೆಯೇ ಕಳೆದ ಬಾರಿ ಬಿಮಲ್ ನರ್ಜರೆ ಹೆಸರಿರುವ ಪಟ್ಟಿಯನ್ನು ಪಾಕಿಸ್ತಾನ ಸರ್ಕಾರ ಭಾರತಕ್ಕೆ ನೀಡಿತ್ತು. ಆತನ ಪೂರ್ವಾಪರ ವಿಚಾರಿಸಿದ ಅಧಿಕಾರಿಗಳು ಆತನ ಐಡಿ ಕಾರ್ಡ್, ಆಧಾರ್ ಕಾರ್ಡ್ ಮತ್ತಿತರೆ ಗುರುತಿನ ಚೀಟಿಗಳನ್ನು ಪರಿಶೀಲಿಸಿ ಆತ ಭಾರತೀಯ ಪ್ರಜೆ ಎಂದು ಸ್ಪಷ್ಟಪಡಿಸಿತ್ತು.
ಇದೀಗ ಆತನ ಗುರುತು ಪತ್ತೆ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಆತನನ್ನು ಶೀಘ್ರ ಬಿಡುಗಡೆ ಮಾಡುವುದಾಗಿ ಪಾಕಿಸ್ತಾನ ಸರ್ಕಾರ ತಿಳಿಸಿದೆ. 
SCROLL FOR NEXT