ನವದೆಹಲಿ: ಅನಾರೋಗ್ಯದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ವಿದೇಶಕ್ಕೆ ತೆರಳಿದ್ದ ಕೇಂದ್ರ ಸಚಿವ ಅರುಣ್ ಜೇಟ್ಲಿ ಕಳೆದ ವಾರ ಸ್ವದೇಶಕ್ಕೆ ಮರಳಿದ್ದು, ಶುಕ್ರವಾರ ಮತ್ತೆ ತಮ್ಮ ಹಿಂದಿನ ಹಣಕಾಸು ಮತ್ತು ಕಾರ್ಪರೇಟ್ ವ್ಯವಹಾರಗಳ ಖಾತೆಗಳನ್ನು ವಹಿಸಿಕೊಂಡಿದ್ದಾರೆ.
ತಮ್ಮ ಅನುಪಸ್ಥಿತಿಯಲ್ಲಿ ಖಾತೆಯನ್ನು ಶಿಸ್ತುಬದ್ಧವಾಗಿ ನಿಭಾಯಿಸಿದ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರನ್ನು ಅಭಿನಂದಿಸಿದ್ದಾರೆ.
ಕರ್ತವ್ಯಕ್ಕೆ ಮರಳುತ್ತಿದ್ದಂತೆ, ಭದ್ರತೆಗೆ ಸಂಬಂಧಿಸಿದ ಸಚಿವ ಸಂಪುಟ ಸಭೆಯಲ್ಲಿ ಪಾಲ್ಗೊಂಡ ಜೇಟ್ಲಿ, ಪುಲ್ವಾಮಾ ಮೀಸಲು ಪಡೆಯ ಮೇಲೆ ಉಗ್ರರ ದಾಳಿಯ ನಂತರ ಜಮ್ಮು ಕಾಶ್ಮೀರದ ಭದ್ರತಾ ವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿದರು.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಪಾಕಿಸ್ತಾನಕ್ಕೆ ನೀಡಿರುವ ಪರಮಾಪ್ತ ರಾಷ್ಟ್ರ ಎಂಬ ಸ್ಥಾನಮಾನವನ್ನು ಹಿಂಪಡೆಯಲು ಸಂಪುಟ ಸಭೆ ನಿರ್ಧರಿಸಿದೆ. ವಿಶ್ವಸಂಸ್ಥೆ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ 'ಉಗ್ರವಾದ ವಿರುದ್ಧ ಸಮಗ್ರ ಅಂತಾರಾಷ್ಟ್ರೀಯ ನಿರ್ಣಯ' ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಪಾಕಿಸ್ತಾನವನ್ನು ಜಾಗತಿಕವಾಗಿ ಏಕಾಂಗಿಯನ್ನಾಗಿಸುವ ನಿಟ್ಟಿನಲ್ಲಿ ವಿದೇಶಾಂಗ ಸಚಿವಾಲಯ ರಾಜತಾಂತ್ರಿಕ ಕ್ರಮಗಳನ್ನು ಕೈಗೊಳ್ಳಲಿದೆ. ಈ ಕುರಿತು ಚರ್ಚಿಸಲು ಗೃಹ ಸಚಿವ ರಾಜನಾಥ್ ಸಿಂಗ್ ಅವರು ಶ್ರೀನಗರದಿಂದ ಮರಳಿದ ನಂತರ ಸರ್ವಪಕ್ಷಗಳ ಸಭೆ ಕರೆಯುವುದಾಗಿ ತಿಳಿಸಿದರು.
ಹುತಾತ್ಮರಿಗೆ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಜೇಟ್ಲಿ, ಯೋಧರ ತ್ಯಾಗಕ್ಕೆ ದೇಶ ಎಂದಿಗೂ ಋಣಿಯಾಗಿರಲಿದೆ. ಪುಲ್ವಾಮಾ ಉಗ್ರರ ದಾಳಿಗೆ ಪಾಕಿಸ್ತಾನ ಭಾರಿ ದರ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಜನವರಿ 13ರಂದು ಅಮೆರಿಕಕ್ಕೆ ತೆರಳಿದ್ದ ಜೇಟ್ಲಿ ಅವರು ಕಳೆದ ವಾರ ವಾಪಾಸಾಗಿದ್ದರು.