ಶ್ರೀನಗರ: ಪಾಕಿಸ್ತಾನ ಹಾಗೂ ಐಎಸ್ಐ ನಿಂದ ಹಣಪಡೆದುಕೊಳ್ಳುತ್ತಿರುವ ವ್ಯಕ್ತಿಗಳಿಂದ ಜಮ್ಮು-ಕಾಶ್ಮೀರದಲ್ಲಿ ಅಶಾಂತಿಗೆ ಕಾರಣವಾಗುತ್ತಿದ್ದು, ಇಂತಹವರಿಗೆ ಕಲ್ಪಿಸಲಾಗುತ್ತಿರುವ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಶುಕ್ರವಾರ ಪ್ರಕಟಿಸಿದ್ದಾರೆ.
ಭದ್ರತಾ ಪಡೆಗಳ ನೈತಿಕ ಸ್ಥೈರ್ಯ ಅತ್ಯುನ್ನತ ಮಟ್ಟದಲ್ಲಿದ್ದು, ಎಂಥಹುದೇ ಪರಿಸ್ಥಿತಿ ನಿಭಾಯಿಸುವ, ಎದುರಾಳಿಗಳಿಗೆ ತಕ್ಕ ಪ್ರತ್ಯತ್ತರ ನೀಡಲು ಸನ್ನದ್ಧ ಸ್ಥಿತಿಯಲ್ಲಿವೆ ಎಂದು ಹೇಳಿದರು.
ಇಂದು ಭದ್ರತಾ ಪಡೆಗಳ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದ ಗೃಹ ಸಚಿವರು, ಕಾಶ್ಮೀರ ಕಣಿವೆಯಲ್ಲಿ ಪ್ರತ್ಯೇಕವಾದಿಗಳು ಮತ್ತಿತರ ನಾಯಕರಿಗೆ ಕಲ್ಪಿಸಲಾಗಿರುವ ಭದ್ರತಾ ವ್ಯವಸ್ಥೆಯನ್ನು ಪರೋಕ್ಷವಾಗಿ ಪ್ರಸ್ತಾಪಿಸಿದರು.
ಬುಡ್ಗಾಂನಲ್ಲಿ ಸಂಜೆ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಶ್ಮೀರದಲ್ಲಿ ಕೆಲ ಶಕ್ತಿಗಳು ಐಎಸ್ಐ ಸೂಚನೆಯಂತೆ ಕಾಶ್ಮೀರದಲ್ಲಿನ ಯವಜನಾಂಗದೊಂದಿಗೆ ಆಟವಾಡುತ್ತಿವೆ. ಈ ಶಕ್ತಿಗಳ ಹುನ್ನಾರ ಯಶಸ್ವಿಯಾಗಲು ಸರ್ಕಾರ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಈ ಶಕ್ತಿಗಳು ಪಾಕಿಸ್ತಾನ ಹಾಗೂ ಐಎಸ್ಐನಿಂದ ಹಣ ಪಡೆದುಕೊಳ್ಳುತ್ತವೆ. ಹಾಗಾಗಿ ಪಾಕಿಸ್ತಾನದಿಂದ ಹಣ ಪಡೆದುಕೊಳ್ಳುತ್ತಿರುವ ವ್ಯಕ್ತಿಗಳಿಗೆ ಕಲ್ಪಿಸಲಾಗಿರುವ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸುವಂತೆ ಸ್ಥಳೀಯ ಆಡಳಿತಕ್ಕೆ ಸೂಚನೆ ನೀಡಿರುವುದಾಗಿ ಗೃಹ ಸಚಿವರು ತಿಳಿಸಿದರು.
ದೇಶದಲ್ಲಿ ಕೋಮುಸೌಹಾರ್ಧತೆಯನ್ನು ಹಾಳುಗೆಡವಲು ಈ ಶಕ್ತಿಗಳು ಯತ್ನಿಸುತ್ತಿವೆ. ಇಂತಹ ಶಕ್ತಿಗಳ ಹುನ್ನಾರ ವಿಫಲಗೊಳಿಸಲು ನಾವು ಒಗ್ಗಟ್ಟಿನಿಂದ ನಿಂತಾಗ ಇಂತಹ ಶಕ್ತಿಗಳನ್ನು ವಿಫಲಗೊಳಿಸುವುದು ಅತ್ಯಂತ ಸುಲಭವಾಗಲಿದೆ ಎಂದು ಹೇಳಿದರು.
ರಸ್ತೆಗಳಲ್ಲಿ ಭದ್ರತಾ ಪಡೆಗಳ ಬೆಂಗಾವಲು ಸಾಗುವಾಗ ನಾಗರಿಕ ಸಂಚಾರಕ್ಕೆ ಅವಕಾಶ ನೀಡಬಾರದು ಎಂಬ ನಿಯಮವನ್ನು ಈಗಿನಿಂದಲೇ ಜಾರಿಗೊಳಿಸಲಾಗಿದೆ. ಈ ನಿರ್ಬಂಧಗಳಿಂದ ನಾಗರೀಕರಿಗೆ ತೊಂದರೆ ಎದುರಾಗಲಿದೆ. ಆದರೆ ಇದಕ್ಕಾಗಿ ಜನರ ಕ್ಷಮೆಯಾಚನೆಹೊರತಾಗಿ ಯಾವುದೇ ಅನ್ಯ ಮಾರ್ಗವಿಲ್ಲ ಎಂದು ಗೃಹ ಸಚಿವರು ಹೇಳಿದರು.
ಭದ್ರತಾ ಪಡೆಗಳು ಸಂಚರಿಸುವ ವೇಳೆ ಸಾರ್ವಜನಿಕ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗುವುದು ಎಂದರು.
ಹುತಾತ್ಮ ಯೋಧರ ಕುಟುಂಬದೊಂದಿಗೆ ನಾವು ಇದ್ದೇವೆ. ಅವರ ಕುಟುಂಬಕ್ಕೆ ಎಲ್ಲಾ ರೀತಿಯ ನೆರವು ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದೇನೆ ಎಂದರು.
ಒಂದು ಪ್ರದೇಶದಲ್ಲಿ ದೊಡ್ಡ ಪ್ರಮಾಣದ ಭದ್ರತಾ ಪಡೆಗಳು ಸಂಚರಿಸುತ್ತಿದ್ದರೆ, ಮುನ್ನಚ್ಚೆರಿಕೆ ಕ್ರಮವಾಗಿ ಸಾರ್ವಜನಿಕ ಸಂಚಾರಕ್ಕೆ ಕೆಲ ಸಮಯ ನಿರ್ಬಂಧ ವಿಧಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಇದೇ ವೇಳೆ ಪುಲ್ವಾಮ ಉಗ್ರರ ದಾಳಿಗೆ ಸರ್ಕಾರ ಪ್ರತೀಕಾರ ತೆಗೆದುಕೊಳ್ಳದೆ ಇರುವುದಿಲ್ಲ. ಸಿಆರ್ಪಿಎಫ್ ಯೋಧರ ತ್ಯಾಗವನ್ನು ಈ ದೇಶ ಮರೆಯುವುದಿಲ್ಲ. ಹುತಾತ್ಮರಾದ ಯೋಧರಿಗೆ ನಾನು ನನ್ನ ಅಂತಿಮ ನಮನ ಸಲ್ಲಿಸುತ್ತೇನೆ. ಈ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ ಎಂದು ದೇಶದ ಜನತೆಗೆ ರಾಜನಾಥ್ ಸಿಂಗ್ ಭರವಸೆ ನೀಡಿದರು.
ಇದಕ್ಕು ಮುನ್ನ ರಾಜನಾಥ್ ಸಿಂಗ್ ಅವರು ಸಿಆರ್ಪಿಎಫ್ ಯೋಧರ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟರು. ಅವರಿಗೆ ಕಾಶ್ಮೀರ ಡಿಜಿಪಿ ಮತ್ತು ಇತರೆ ಅಧಿಕಾರಿಗಳು ಸಾಥ್ ನೀಡಿದರು.