ದೇಶ

ತೆಲಂಗಾಣ ರಾಯಭಾರಿ ಸ್ಥಾನದಿಂದ ಸಾನಿಯಾರನ್ನು ತೆಗೆದುಹಾಕಿ: ಬಿಜೆಪಿ ಶಾಸಕ

Lingaraj Badiger
ಹೈದರಾಬಾದ್: ಪಾಕಿಸ್ತಾನದ ಸೊಸೆ, ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರನ್ನು ತೆಲಂಗಾಣ ಸರ್ಕಾರದ ರಾಯಭಾರಿ ಸ್ಥಾನದಿಂದ ತೆಗೆದು ಹಾಕಬೇಕು ಎಂದು ಬಿಜೆಪಿ ಶಾಸಕ ರಾಜಾ ಸಿಂಗ್ ಸೋಮವಾರ ಒತ್ತಾಯಿಸಿದ್ದಾರೆ.
ಪುಲ್ವಾಮಾ ಉಗ್ರರ ದಾಳಿಯನ್ನು ಖಂಡಿಸಿದ ಬಿಜೆಪಿ ಶಾಸಕ, ಸಾನಿಯಾ ಮಿರ್ಜಾ ಪಾಕಿಸ್ತಾನದ ಮಗಳಾಗಿರುವುದರಿಂದ ಅವರನ್ನು ಶೀಘ್ರವೇ ತೆಲಂಗಾಣ ರಾಜ್ಯದ ರಾಯಭಾರಿ ಸ್ಥಾನದಿಂದ ವಜಾಗೊಳಿಸಿ ಎಂದು ಮುಖ್ಯಮಂತ್ರಿ ಕೆ. ಚಂದ್ರಶೇಖರ್ ಅವರಿಗೆ ಆಗ್ರಹಿಸಿದ್ದಾರೆ.
ತೆಲಂಗಾಣ ಮುಖ್ಯಮಂತ್ರಿಯಲ್ಲಿ ನನ್ನದೊಂದು ಮನವಿ. ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಪಾಕಿಸ್ತಾನದ ಬಾಂಧವ್ಯ ಕಡಿದುಕೊಳ್ಳುತ್ತಿರುವಾಗ ನಾವೂ ಸಹ ಒಂದು ಬಾಂಧವ್ಯವನ್ನು ಕಡಿದುಕೊಳ್ಳಬೇಕಿದೆ. ತೆಲಂಗಾಣದ ಬ್ರಾಂಡ್ ಅಂಬಾಸಿಡರ್ ಆಗಿರುವ ಸಾನಿಮಾ ಮಿರ್ಜಾ ಅವರನ್ನು ತಕ್ಷಣವೇ ಆ ಸ್ಥಾನದಿಂದ ಕೈಬಿಡಬೇಕು ಎಂದು ವಿವಾದಾತ್ಮಕ ಬಿಜೆಪಿ ಶಾಸಕ ರಾಜಾ ಸಿಂಗ್ ಅವರು ಹೇಳಿರುವ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.
ಕಳೆದ ಫೆಬ್ರವರಿ 14 ರಂದು ಪುಲ್ವಾಮದಲ್ಲಿ ನಡೆದ ಉಗ್ರ ದಾಳಿಯಲ್ಲಿ 40 ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದರು.
SCROLL FOR NEXT