ಕಾಸರಗೋಡು: ಇಬ್ಬರು ಕಾಂಗ್ರೆಸ್ ಕಾರ್ಯಕರ್ತರ ಹತ್ಯೆ
ಅನಾಮಿಕ ದುಷ್ಕರ್ಮಿಗಳಿಂದ ಇಬ್ಬರು ಕಾಂಗ್ರೆಸ್ ಕಾರ್ಯಕರ್ತರು ಹತ್ಯೆಯಾಗಿರುವ ಘಟನೆ ಕಾಸರಗೋಡಿನಲ್ಲಿ ನಡೆದಿದೆ.
ಫೆ.17 ರ ರಾತ್ರಿ 8 ಗಂಟೆಗೆ ಈ ಘಟನೆ ನಡೆದಿದ್ದು, ಮೃತರನ್ನು ಕೃಪೇಶ್ ಹಾಗೂ ಶರತ್ ಲಾಲ್ ಎಂದು ಗುರುತಿಸಲಾಗಿದೆ. ಘಟನೆ ವರದಿಯಾಗುತ್ತಿದ್ದಂತೆಯೇ ಕಾಂಗ್ರೆಸ್ ಸಿಪಿಐ(ಎಂ) ವಿರುದ್ಧ ವಾಗ್ದಾಳಿ ನಡೆಸಿದ್ದು, ಸಿಪಿಐಎಂ ಗೂಂಡಾಗಳನ್ನು ಬಳಸಿಕೊಂಡು ಕಾಂಗ್ರೆಸ್ ಪಕ್ಷವನ್ನು ನಾಶ ಮಾಡಲು ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತಾಲ ಆರೋಪಿಸಿದ್ದಾರೆ.
ಯಾವುದೇ ಪ್ರಚೋದನೆ ಇಲ್ಲದಿದ್ದರೂ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಯಾವುದೇ ಕ್ರಿಮಿನಲ್ ಚಟುವಟಿಕೆಗಳಲ್ಲೂ ಭಾಗಿಯಾಗಿರಲಿಲ್ಲ. ಅವರ ವಿರುದ್ಧ ಪ್ರಕರಣಗಳು ಇರಲಿಲ್ಲ. ಸರ್ಕಾರ ಕೂಡಲೇ ಕೊಲೆಗಾರರನ್ನು ಪತ್ತೆ ಮಾಡಿ ಶಿಕ್ಷೆ ವಿಧಿಸಬೇಕೆಂದು ಚೆನ್ನಿತಾಲ ಆಗ್ರಹಿಸಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಿಪಿಐಎಂ ಪಕ್ಷದವರೇ ಈ ಕೃತ್ಯ ಎಸಗಿರುವ ಸಾಧ್ಯತೆಗಳಿವೆ ಎಂದು ಚೆನ್ನಿತಾಲ ಇದೇ ವೇಳೆ ಆರೋಪಿಸಿದ್ದಾರೆ.