ದೇಶ

ರಾಜಕಾರಣಿಗಳ ಆಕ್ರಮಣಕಾರಿ ನೀತಿಯಿಂದ ಕಾಶ್ಮೀರಿ ಯುವಕರು ಉಗ್ರತ್ವದ ಹಾದಿ: ಪ್ರತ್ಯೇಕತಾವಾದಿ ಮುಖಂಡರು

Sumana Upadhyaya

ಶ್ರೀನಗರ: ರಾಜಕೀಯ ಇಚ್ಛಾಶಕ್ತಿಯನ್ನು ಹತ್ತಿಕ್ಕಿ ಆಕ್ರಮಣಕಾರಿ ಮನೋಭಾವದಿಂದ ಆಸೆ, ಆಕಾಂಕ್ಷೆಗಳನ್ನು ಹೊಸಕಿಹಾಕುವುದರಿಂದ ಕಾಶ್ಮೀರಿ ಯುವಕರು ಉಗ್ರಗಾಮಿತ್ವದ ಹಾದಿ ಹಿಡಿಯುತ್ತಿದ್ದಾರೆ ಎಂದು ಪ್ರತ್ಯೇಕತಾವಾದಿ ನಾಯಕರು ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ಜಂಟಿ ಹೇಳಿಕೆ ಪ್ರಕಟಿಸಿರುವ ಪ್ರತ್ಯೇಕತಾವಾದಿ ನಾಯಕ ಸೈಯದ್ ಆಲಿ ಗಿಲಾನಿ, ಮಾರ್ವಾಝ್ ಮೊಹಮ್ಮದ್, ಒಮರ್ ಫಾರೂಕ್ ಹಾಗೂ ಮೊಹಮ್ಮದ್ ಯಾಸ್ಸಿನ್ ಮಲಿಕ್, ಜನರ ಚಟುವಟಿಕೆ, ಸ್ವಾತಂತ್ರ್ಯಗಳನ್ನು ಸೇನಾಪಡೆಯ ಶೋಷಣೆ, ಪೊಲೀಸರ ದರ್ಪ. ಜನರ ಸಾವು-ನೋವು, ಹತ್ಯಾಕಾಂಡ ಮತ್ತು ಇತರ ಕ್ರೂರ ವಿಧಾನಗಳಿಂದ ಹತ್ತಿಕ್ಕಬಹುದು ಎಂದು ಭಾವಿಸಿದರೆ ಭಾರತ ಸೇರಿದಂತೆ ಯಾವುದೇ ದೇಶ ಕೂಡ ಸ್ವಾತಂತ್ರ್ಯದ ಸವಿಯನ್ನು ಸವಿಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಜಿಒಸಿ 15 ಕಾರ್ಪ್ಸ್ ಲೆಫ್ಟಿನೆಂಟ್ ಜನರಲ್ ದಿಲ್ಲನ್ ಅವರು ಗನ್, ಬಂದೂಕು ಹಿಡಿದ ತಮ್ಮ ಮಕ್ಕಳು ಸೇನೆಗೆ ಶರಣಾಗುವಂತೆ ಹೇಳಿ, ಇಲ್ಲದಿದ್ದರೆ ಅವರನ್ನು ಸಾಯಿಸಲಾಗುತ್ತದೆ ಎಂದು ಪೋಷಕರಿಗೆ ಮಾಡಿದ ಮನವಿಯನ್ನು ಪ್ರತ್ಯೇಕತಾವಾದಿ ನಾಯಕರು ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.ಇಂದಿನ ಯುವಕರು ಕೆಲವು ಮಾರ್ಗಗಳನ್ನು ಹಿಡಿದರೆ ಅದರಿಂದ ಅವರನ್ನು ತಪ್ಪಿಸುವುದು ತಂದೆ, ತಾಯಿ ಅಥವಾ ರಾಜಕೀಯ ನಾಯಕರ ಕೈಯಲ್ಲಿ ಇರುವುದಿಲ್ಲ. ಇದೀಗ ಚೆಂಡು ಭಾರತದ ರಾಜಕಾರಣಿಗಳು ಮತ್ತು ಮಿಲಿಟರಿ ನಾಯಕತ್ವದಡಿಯಲ್ಲಿದೆ. ಕಾಶ್ಮೀರದಲ್ಲಿ ರಾಜಕೀಯ ಭಿನ್ನಾಭಿಪ್ರಾಯದ ಸಣ್ಣ ಜಾಗವನ್ನು ಕೂಡ ಹತ್ತಿಕ್ಕಲು ಅವರು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಭಾರತದ ರಾಜಕೀಯ ನಾಯಕತ್ವದ ಆಕ್ರಮಣಕಾರಿ ನೀತಿ, ಪೊಲೀಸರ ದರ್ಪಗಳಿಂದಾಗಿ ಯುವಕರು ಅಡ್ಡದಾರಿ ಹಿಡಿಯುತ್ತಿದ್ದಾರೆ. ಕಾಶ್ಮೀರದಲ್ಲಿನ ಶಾಂತಿಯುತ ರಾಜಕೀಯ ಸ್ಥಿತಿಯನ್ನು ಹತ್ತಿಕ್ಕಿ ಕಾಶ್ಮೀರಿ ಯುವಕರನ್ನು ಉಗ್ರಗಾಮಿತ್ವದ ಹಾದಿಗೆ ದೂಡುತ್ತಿದ್ದಾರೆ ಎಂದು ಆಪಾದಿಸಿದ್ದಾರೆ.

SCROLL FOR NEXT