ಪರಮಾಪ್ತ ರಾಷ್ಟ್ರ ಪಾಕ್ ಉಗ್ರರ ಮೇಲೆ ಭಾರತದ ವೈಮಾನಿಕ ದಾಳಿ: ಚೀನಾ ಹೇಳಿದ್ದಿಷ್ಟು
ನವದೆಹಲಿ: ಭಾರತ ಪಾಕಿಸ್ತಾನದ ಪ್ರಾಂತ್ಯದಲ್ಲಿರುವ ಬಾಲಕೋಟ್ ನ ಉಗ್ರರ ಕ್ಯಾಂಪ್ ಗಳ ಮೇಲೆ ವೈಮಾನಿಕ ದಾಳಿ ನಡೆಸಿರುವ ಬೆನ್ನಲ್ಲೇ ಪಾಕಿಸ್ತಾನದ ಪರಮಾಪ್ತ ರಾಷ್ಟ್ರ ಚೀನಾ ಪ್ರತಿಕ್ರಿಯೆ ನೀಡಿದೆ.
ಭಾರತದ ವೈಮಾನಿಕ ದಾಳಿಯ ಬಗ್ಗೆ ಮಾತನಾಡಿರುವ ಚೀನಾ, ಭಾರತ ಹಾಗೂ ಪಾಕಿಸ್ತಾನಕ್ಕೆ ಸಂಯಮ ಕಾಯ್ದುಕೊಳ್ಳುವಂತೆ ಕರೆ ನೀಡಿದೆ. ಇದೇ ವೇಳೆ ಭಾರತಕ್ಕೂ ಸಲಹೆ ನೀಡಿರುವ ಚೀನಾ, ಅಂತಾರಾಷ್ಟೀಯ ಸಮುದಾಯದ ಮೂಲಕ ಭಯೋತ್ಪಾದನೆ ವಿರುದ್ಧ ಹೋರಾಡಬೇಕೆಂದು ಹೇಳಿದೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲೂ ಕಾಂಗ್, ಪಾಕ್ ನೆಲದಲ್ಲಿ ಭಾರತ ವೈಮಾನಿಕ ದಾಳಿ ನಡೆಸಿರುವ ಬಗ್ಗೆ ವರದಿಗಳನ್ನು ಗಮನಿಸಿದ್ದೇವೆ. ದಕ್ಷಿಣ ಏಷ್ಯಾಗೆ ಭಾರತ ಹಾಗೂ ಪಾಕಿಸ್ತಾನ ಎರಡೂ ರಾಷ್ಟ್ರಗಳು ಮುಖ್ಯವಾದದ್ದು, ದಕ್ಷಿಣ ಏಷ್ಯಾದಲ್ಲಿ ಶಾಂತಿ ಮತ್ತು ಸ್ಥಿರತೆಗಾಗಿ ಉಭಯ ರಾಷ್ಟ್ರಗಳ ನಡುವೆ ಸಹಕಾರ ಹಾಗೂ ಉತ್ತಮ ಬಾಂಧವ್ಯ ಅಗತ್ಯ ಎಂದು ಚೀನಾ ಹೇಳಿದೆ.
ಸಂಯಮ ಕಾಯ್ದುಕೊಂಡು ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯ ಮಾತುಕತೆಯನ್ನು ಸುಧಾರಿಸಿಕೊಳ್ಳುತ್ತವೆ ಎಂಬ ವಿಶ್ವಾಸವಿದೆ ಎಂದು ವಿದೇಶಾಂಗ ಇಲಾಖೆ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics