ನವದೆಹಲಿ: ಪುಲ್ವಾಮ ಉಗ್ರ ದಾಳಿ ಬಳಿಕ ಪಾಕಿಸ್ತಾನದ ಬೆನ್ನಿಗೆ ನಿಂತಿದ್ದ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಈಗ ಎಚ್ಚೆತ್ತುಕೊಂಡಿದ್ದು, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ವಾಯುಸೇನೆ ನಡೆಸಿದ ವಾಯುದಾಳಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಪುಲ್ವಾಮ ಉಗ್ರ ದಾಳಿಗೆ ಪ್ರತೀಕಾರವಾಗಿ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಪಾಕ್ನ ಬಾಲಾಕೋಟ್ ನಲ್ಲಿರುವ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಉಗ್ರರ ಅಡುಗುತಾಣಗಳ ಮೇಲೆ ವೈಮಾನಿಕ ದಾಳಿ ಮಾಡಿದ ಭಾರತೀಯ ಸೇನೆಯ ದಿಟ್ಟತನವನ್ನು ಮಾಜಿ ಕ್ರಿಕೆಟಿಗ ಹಾಗೂ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಅವರು ಶ್ಲಾಘಿಸಿದ್ದಾರೆ.
ಭಾರತದ ವೈಮಾನಿಕ ದಾಳಿಯ ಬಗ್ಗೆ ಹಿಂದಿಯಲ್ಲಿ ಟ್ವೀಟ್ ಮಾಡಿರುವ ನವಜೋತ್ ಸಿಂಗ್ ಸಿಧು, 'ಕಬ್ಬಿಣವನ್ನು ಕಬ್ಬಿಣದಿಂದಲೇ ಕತ್ತರಿಸಬೇಕು. ಬೆಂಕಿಯನ್ನು ಬೆಂಕಿಯಿಂದಲೇ ನಂದಿಸಬೇಕು. ಹಾವು ಕಡಿತಕ್ಕೆ ವಿಷವೇ ಔಷಧಿ ಎನ್ನುವ ಹಾಗೇ ಉಗ್ರತ್ವಕ್ಕೆ ದಾಳಿಯಿಂದಲೇ ಉತ್ತರ ನೀಡಬೇಕು ಎಂದು ಸೇನೆಯ ಸಾಮರ್ಥ್ಯವನ್ನು ಶ್ಲಾಘಿಸಿದ್ದಾರೆ.
ಈ ಮೊದಲು ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯ ಬಗ್ಗೆ ಮಾತಾನಾಡಿದ್ದ ಸಿಧು, ಇಡೀ ಪಾಕಿಸ್ತಾನವನ್ನು ದೂಷಿಸಬೇಡಿ ಎಂದು ಹೇಳಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದರು. ಅಲ್ಲದೆ, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಬೆನ್ನಿಗೆ ನಿಂತು ಈ ವಿಚಾರದಲ್ಲಿ ಶಾಂತಿ ಮಾತುಕತೆ ನಡೆಸಿದರೆ ಉತ್ತಮ ಎಂದು ಹೇಳಿದ್ದರು.