ನವದೆಹಲಿ: ಭಾರತೀಯ ವಾಯುಪಡೆ ಪಾಕಿಸ್ತಾನದ ಗಡಿಯೊಳಕ್ಕೆ ನುಗ್ಗಿ ಉಗ್ರರ ವಿರುದ್ಧ ಮಂಗಳವಾರ ಮುಂಜಾನೆ ನಡೆಸಿದ್ದ ಕಾರ್ಯಾಚರಣೆ ಇದೀಗ ವಿಶ್ವಾದ್ಯಂತ ಸುದ್ದಿಯಾಗುತ್ತಿದ್ದು, ಕಾರ್ಯಾಚರಣೆ ವೇಳೆ ಪ್ರಧಾನಿ ಮೋದಿ ರಾತ್ರಿ ಇಡೀ ನಿದ್ದೆಗೆಟ್ಟು ಅಧಿಕಾರಿಗಳಿಂದ ಕ್ಷಣ ಕ್ಷಣದ ಮಾಹಿತಿ ಪಡೆಯುತ್ತಿದ್ದರು ಎಂದು ಹೇಳಲಾಗಿದೆ.
ಹೌದು.. ಸರ್ಜಿಕಲ್ ಸ್ಚ್ರೈಕ್ 2.0 ಎಂದೇ ಹೇಳಲಾಗುತ್ತಿರುವ ವಾಯುಸೇನೆಯ ಪಿಒಕೆ ಮೇಲಿನ ದಾಳಿ ಸಂದರ್ಭದಲ್ಲಿ ಪ್ರಧಾನಿ ಮೋದಿ ಮುಂಜಾನೆವರೆಗೂ ನಿದ್ರೆ ಮಾಡಿರಲಿಲ್ಲವಂತೆ. ಈ ಬಗ್ಗೆ ಸರ್ಕಾರದ ಅಧಿಕೃತ ಮೂಲಗಳೇ ತಿಳಿಸಿದ್ದು, ಪ್ರಧಾನಿ ನರೇಂದ್ರ ಮೋದಿ ರಾತ್ರಿ ಇಡೀ ಎಚ್ಚರವಾಗಿದ್ದು ಅಧಿಕಾರಿಗಳಿಂದ ಕ್ಷಣ, ಕ್ಷಣದ ಮಾಹಿತಿ ಪಡೆಯುತ್ತಿದ್ದರು. ಅವರಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಕೂಡ ಸಾಥ್ ನೀಡಿದ್ದರು ಎನ್ನಲಾಗಿದೆ.
ಪುಲ್ವಾಮ ಉಗ್ರದಾಳಿ ದಿನವೇ ಮುಹೂರ್ತ ಫಿಕ್ಸ್
ಇಂದಿನ ವಾಯುಸೇನೆ ದಾಳಿ ಎಲ್ಲರಿಕೂ ಆಘಾತವನ್ನುಂಟು ಮಾಡಿರಬಹುದು. ಆದರೆ ಇದೇ ಫೆಬ್ರವರಿ 14ರಂದು ಪುಲ್ವಾಮ ಹೊರವಲಯದಲ್ಲಿ ಭಾರತೀಯ ಸೈನಿಕರ ಮಾರಣಹೋಮವಾದಾಗಲೇ ಸರ್ಜಿಕಲ್ ಸ್ಟ್ರೈಕ್ 2.0ಗೆ ಮುಹೂರ್ತ ಫಿಕ್ಸ್ ಆಗಿತ್ತು. ಮಾರನೆಯ ದಿನವೇ ಭಾರತೀಯ ಸೇನೆಯ ಮಹತ್ವದ ಸಭೆ ಕರೆದಿದ್ದ ಪ್ರಧಾನಿ ಮೋದಿ 2.0ಗೆ ಸೂಚನೆ ನೀಡಿದ್ದರಂತೆ. ಅಂದೇ ವಾಯುಸೇನೆ ಮುಖ್ಯಸ್ಥ ಬಿಎಸ್ ಧನೋವಾ ಅವರು 40 ಯೋಧರ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುವ ಕುರಿತು ಮಾತನಾಡಿದ್ದರಂತೆ. ಅದರಂತೆ ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದ ಅವರು ಪಿಒಕೆಯಲ್ಲಿನ ಉಗ್ರ ಕ್ಯಾಂಪ್ ಗಳು ಮತ್ತು ಉಗ್ರ ಚಲನವನಗಳ ಕುರಿತು ಗುಪ್ತಚರ ಮೂಲಗಳಿಂದ ಮಾಹಿತಿ ತರಿಸಿಕೊಳ್ಳುತ್ತಿದ್ದರಂತೆ.
ಅಂತೆಯೇ ಪುಲ್ವಾಮ ಉಗ್ರ ದಾಳಿ ಬಳಿಕ ಗಡಿಯಲ್ಲಿದ್ದ ಉಗ್ರರು ಭಾರತ ದಾಳಿ ಮಾಡುತ್ತದೆ ಎಂಬ ಭಯದಿಂದ ಉಗ್ರರ ಸ್ವರ್ಗವೆಂದೇ ಖ್ಯಾತಿಗಳಿಸಿರುವ ಬಾಲಾಕೋಟ್ ಉಗ್ರ ಕ್ಯಾಂಪ್ ಗೆ ತೆರಳಿದ್ದರು. ಈ ಮಾಹಿತಿ ಪಡೆದ ವಾಯುಸೇನೆ ಇದೇ ಸರಿಯಾದ ಸಂದರ್ಭ ಎಂದು ಇಂದು ಮುಂಜಾನೆ ದಾಳಿ ಮಾಡಿ ಬರೊಬ್ಬರಿ 350ಕ್ಕೂ ಹೆಚ್ಚು ಉಗ್ರರರನ್ನು ಹೊಡೆದುರುಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ದಕ್ಷಿಣ ಬ್ಲಾಕ್ ನಲ್ಲಿರುವ ರಾಷ್ಟ್ರಪತಿ ಭವನದ ಕೋಣೆಯಲ್ಲಿ ಕುಳಿತು ವಾಯುಪಡೆ ಸಂಪೂರ್ಣ ಕಾರ್ಯಾಚರಣೆ ಬಗ್ಗೆ ಖುದ್ದು ಮಾಹಿತಿ ಪಡೆದಿರುವುದಾಗಿ ವರದಿ ವಿವರಿಸಿದೆ. ಉನ್ನತ ಗುಪ್ತಚರ ಇಲಾಖೆ ಮೂಲಗಳ ಪ್ರಕಾರ, ವಾಯುಪಡೆ ಮುಖ್ಯಸ್ಥ ಬೀರೆಂದರ್ ಸಿಂಗ್ ಧಾನೋವಾ ಅವರು ಇಡೀ ದಾಳಿಯ ನೀಲನಕ್ಷೆ ರೂಪಿಸಿದ್ದರು. ಅಲ್ಲದೇ ವಾಯುಪಡೆಯ ಕಾರ್ಯಾಚರಣೆ ಹೇಗಿರುತ್ತದೆ ಎಂಬುದನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಪ್ರಧಾನಿ ಮೋದಿಗೆ ವಿವರವಾಗಿ ಮಾಹಿತಿ ನೀಡಿದ್ದರು ಎಂದು ಹೇಳಿದೆ.
ಮಂಗಳವಾರ ಮುಂಜಾನೆ ನಡೆದ ಕಾರ್ಯಾಚರಣೆ ಬಗ್ಗೆ ಪ್ರಧಾನಿ ಮೋದಿ ಸೇರಿದಂತೆ ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಯ ಮುಖ್ಯಸ್ಥರು ಮಾಹಿತಿ ಪಡೆದುಕೊಂಡಿದ್ದರು. ದಾಳಿಯ ತಂತ್ರ, ನಡೆಸಬೇಕಾದ ಕಾರ್ಯಾಚರಣೆ ಬಗ್ಗೆ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಕಾರ್ಯಾಚರಣೆ ಯಶಸ್ವಿಯಾಗಿ ಪೂರ್ಣಗೊಂಡು ಭಾರತೀಯ ವಾಯುಸೇನಾ ಸಿಬ್ಬಂದಿ ಸುರಕ್ಷಿತವಾಗಿ ಹಿಂತಿರುಗಿದ ಬಳಿಕವಷ್ಟೆ ಪ್ರಧಾನಿ ಮೋದಿ ತಮ್ಮಮನೆಗೆ ತೆರಳಿದರು. ಬಳಿಕ ಯುದ್ಧ ವಿಮಾನಗಳ ನೇತೃತ್ವವಹಿಸಿಕೊಂಡ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ ಬಳಿಕ ಅಂದರೆ ಬೆಳಗ್ಗೆ 4.30ರ ಸುಮಾರಿಗೆ ಮೋದಿ ವಿಶ್ರಾಂತಿ ಪಡೆಯಲು ನಿರ್ಗಮಿಸಿದರು ಎನ್ನಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos