ನವದೆಹಲಿ: ಭಾರತೀಯ ವಾಯುಪಡೆಯ ಪೈಲಟ್ ಅಭಿನಂದನ್ ಅವರನ್ನು ನಾಳೆ ಬಿಡುಗಡೆ ಮಾಡುವುದಾಗಿ ಪಾಕಿಸ್ತಾನ ಘೋಷಿಸಿದ ಕೆಲವೇ ಕ್ಷಣಗಳಲ್ಲಿ ಪರೋಕ್ಷವಾಗಿ ಪ್ರತಿಕ್ರಿಯಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಇದು ಪ್ರಾಯೋಗಿಕ ಅಷ್ಟೆ, ನಿಜವಾದದ್ದು ಇನ್ನು ಬಾಕಿ ಇದೆ ಎಂದು ಗುರುವಾರ ಹೇಳಿದ್ದಾರೆ.
ಇಂದು ವಿಜ್ಞಾನ ಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಈಗಷ್ಟೆ ಪೈಲಟ್(ಪ್ರಾಯೋಗಿಕ) ಯೋಜನೆ ಪೂರ್ಣಗೊಳಿಸಿದ್ದೇವೆ. ಒಂದು ಯೋಜನೆ ಆರಂಭಿಸುವ ಮುನ್ನ ಅದನ್ನು ಪ್ರಾಯೋಗಿಕವಾಗಿ ಪರೀಕ್ಷಿಸಲಾಗುತ್ತದೆ. ಅದೇ ರೀತಿ ಈಗ ಒಂದು ಪೈಲಟ್ ಯೋಜನೆ ಪೂರ್ಣಗೊಳಿಸಿದ್ದು, ನಿಜವಾದದ್ದು ಮಾಡಬೇಕಿದೆ ಮತ್ತು ಈ ಮುನ್ನ ಮಾಡಿದ್ದು ಬರೀ ತರಬೇತಿ ಎಂದು ಹೇಳಿದ್ದಾರೆ.
ಇದಕ್ಕು ಮುನ್ನ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ಶಾಂತಿಯ ಸೂಚಕವಾಗಿ ನಮ್ಮ ವಶದಲ್ಲಿರುವ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಶುಕ್ರವಾರ ಬಿಡುಗಡೆ ಮಾಡುವುದಾಗಿ ಸಂಸತ್ ಜಂಟಿ ಅಧಿವೇಶನದಲ್ಲಿ ಹೇಳಿದ್ದರು.