ನವದೆಹಲಿ: ರಾಮ ಮಂದಿರ ವಿಷಯವನ್ನು ಮುಂದಿಟ್ಟುಕೊಂಡು ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಏರಿದ ಬಿಜೆಪಿ, ಈಗ ಪ್ರಕರಣ ಕೋರ್ಟ್ ನಲ್ಲಿದೆ, ಹಾಗಾಗಿ ಏನು ಮಾಡಲು ಸಾಧ್ಯವಿಲ್ಲ ಎಂದು ಹೇಳಿ ರಾಗ ಬದಲಿಸುತ್ತಿದೆ ಎಂದು ಶಿವಸೇನೆ ಮುಖಂಡ ಸಂಜಯ್ ರಾವತ್ ಆರೋಪಿಸಿದ್ದಾರೆ.
ಪ್ರಕರಣ ಈಗ ನ್ಯಾಯಾಲಯದಲ್ಲಿದೆ. ಈ ಹಂತದಲ್ಲಿ ನಾವು ಏನನ್ನೂ ಮಾಡಲಾಗದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ, ಪ್ರಕರಣ ಕೋರ್ಟ್ ನಲ್ಲಿರುವುದು ನಮಗೂ ಗೊತ್ತು, ಅದನ್ನು ಪ್ರಧಾನಿ ಮೋದಿ ಹೇಳುವ ಅವಶ್ಯಕತೆಯಿಲ್ಲ ಎಂದು ಹರಿಹಾಯ್ದಿದ್ದಾರೆ.
ರಾಮಮಂದಿರ ನಿರ್ಮಾಣ ವಿಷಯಕ್ಕಾಗಿ ರಕ್ತಪಾತವಾಗುವ ಅಗತ್ಯವೇನಿತ್ತು, ಮುಂಬಯಿಯಲ್ಲಿ ಬಾಂಬ್ ಬ್ಲಾಸ್ಟ್ ಆದ ವೇಳೆ ಸುಮಾರು ನೂರಾರು ಕರಸೇವಕರು ಹುತಾತ್ಮರಾಗಿದ್ದಾರೆ, ರಾಮ ಮಂದಿರ ಹೆಸರಿನಲ್ಲಿ ನಡೆದ ಈ ರಕ್ತಪಾತಕ್ಕೆ ಹೊಣೆಯಾರು ಇದೇ ವಿಷಯ ಇಟ್ಟುಕೊಂಡು ನೀವು ಅಧಿಕಾರಕ್ಕೆ ಬಂದಿದ್ದೀರಿ, ಅದನ್ನು ಮರೆಯಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.
ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾಗುವವರೆಗೂ ರಾಮ ಮಂದಿರ ನಿರ್ಮಾಣ ವಿಚಾರವಾಗಿ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ನೀಡಿದ ಹೇಳಿಕೆಗೆ ಸಂಜಯ್ ರಾವತ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.