ಕೊಚ್ಚಿ: ಇಬ್ಬರು ಮಹಿಳೆಯರು ಶಬರಿಮಲೆ ದೇಗುಲ ಪ್ರವೇಶದ ಬೆನ್ನಲ್ಲೇ ಅಯ್ಯಪ್ಪ ಸ್ವಾಮಿ ದರ್ಶನ ಪಡೆಯಲಿಚ್ಛಿಸುವ ಎಲ್ಲ ಮಹಿಳೆಯರಿಗೆ ಸೂಕ್ತ ಭದ್ರತೆ ನೀಡುವಂತೆ ಕೇರಳ ಸರ್ಕಾರ ಪೊಲೀಸರಿಗೆ ಆದೇಶ ನೀಡಿದೆ.
ಈ ಬಗ್ಗೆ ಸ್ವತಃ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಪೊಲೀಸರಿಗೆ ನಿರ್ದೇಶನ ನೀಡಿದ್ದು, ಅಲ್ಲದೆ ಶಬರಿಮಲೆಗೆ ಮಹಿಳೆಯರು ಪ್ರವೇಶ ಮಾಡಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆದಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಾವು ಪೊಲೀಸ್ ವರಿಷ್ಠಾದಿಕಾರಿಗಳಿಂದ ಮಾಹಿತಿ ಪಡೆದಿದ್ದು, ಇಬ್ಬರು ಮಹಿಳೆಯರು ಇಂದು ಮುಂಜಾನೆ ದೇಗುಲ ಪ್ರವೇಶಿಸಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆದಿದ್ದಾರೆ ಎಂದು ಹೇಳಿದ್ದಾರೆ.
ಅಂತೆಯೇ ಶಬರಿಮಲೆ ದೇಗುಲ ಪ್ರವೇಶ ಮಾಡಬೇಕು ಎನ್ನುವ ಎಲ್ಲ ಮಹಿಳೆಯರಿಗೂ ಸಕಲ ಭದ್ರತೆ ನೀಡುವಂತೆ ತಾವು ಕೇರಳ ಪೊಲೀಸರಿಗೆ ಸೂಚನೆ ನೀಡಿದ್ದೇವೆ. ಅಂತೆಯೇ ಪ್ರಸ್ತುತ ದರ್ಶನ ಪಡೆದ ಮಹಿಳೆಯರು ಮತ್ತು ಅವರ ಕುಟುಂಬಸ್ಥರಿಗೆ ಸೂಕ್ತ ಭದ್ರತೆ ನೀಡುವಂತೆ ಆದೇಶ ನೀಡಲಾಗಿದೆ ಎಂದು ಪಿಣರಾಯಿ ವಿಜಯನ್ ಮಾಹಿತಿ ನೀಡಿದ್ದಾರೆ.
ಕೇರಳದ ಮಾಧ್ಯಮಗಳು ವರದಿ ಮಾಡಿರುವಂತೆ ಸುಮಾರು 40 ವರ್ಷ ವಯಸ್ಸಿನ ಇಬ್ಬರು ಮಹಿಳೆಯರು ಇಂದು ಬೆಳಗ್ಗೆ ಸುಮಾರು 3.45ರ ವೇಳೆಯಲ್ಲಿ ಶಬರಿ ಗಿರಿಗೆ ತೆರಳಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ದರ್ಶನ ಪಡೆದ ಮಹಿಳೆಯರನ್ನು ಮಲಪ್ಪುರಂನ ಕನಕ ದುರ್ಗ ಮತ್ತು ಕಲ್ಲಿಕೋಟೆಯ ಬಿಂದು ಎಂದು ಗುರುತಿಸಲಾಗಿದೆ. ಮಹಿಳೆಯರು ಅಯ್ಯಪ್ಪ ಸನ್ನಿದಾನಕ್ಕೆ ತೆರಳಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ವಿಡಿಯೋ ಇದೀಗ ವೈರಲ್ ಆಗುತ್ತಿದ್ದು, ಸುಪ್ರೀಂ ಕೋರ್ಟ್ ಆದೇಶದ ಬಳಿಕ ಇದೇ ಮೊದಲ ಬಾರಿಗೆ ಮಹಿಳೆಯರು ಅಯ್ಯಪ್ಪ ದೇಗುಲ ಪ್ರವೇಶ ಮಾಡಿ ದೇವರ ದರ್ಶನ ಪಡೆದಿದ್ದಾರೆ.
18 ಮೆಟ್ಟಿಲ ಬದಲಿಗೆ ಪರ್ಯಾಯ ಮಾರ್ಗದಲ್ಲಿ ಸನ್ನಿಧಾನ ಏರಿದ ಮಹಿಳೆಯರು
ಇನ್ನು ಅಯ್ಯಪ್ಪನ ಭಕ್ತರು ಪೂಜ್ಯನೀಯ ಎಂದು ಭಾವಿಸುವ 18 ಮೆಟ್ಟಿಲುಗಳ ಬದಲಿಗೆ ಮಹಿಳೆಯರು ಸನ್ನಿಧಾನಕ್ಕೆ ತೆರಳಲು ಪರ್ಯಾಯ ಮಾರ್ಗದಲ್ಲಿ ತೆರಳಿದ್ದಾರೆ ಎಂದು ತಿಳಿದುಬಂದಿದೆ. ಈ ಮೊದಲೂ ಕೂಡ ಮಹಿಳೆಯರು ಸನ್ನಿಧಾನಕ್ಕೆ ತೆರಳಲು ಯತ್ನಿಸಿದ್ದರಾದರೂ ತೀವ್ರ ಪ್ರತಿಭಟನೆ ಹಿನ್ನಲೆಯಲ್ಲಿ ವಾಪಸ್ ಆಗಿದ್ದರು. ಇದೀಗ ಕೆಲ ವ್ಯಕ್ತಿಗಳ ಭದ್ರತೆಯೊಂದಿಗೆ ಮುಂಜಾನೆಯೇ ಸನ್ನಿಧಾನಕ್ಕೆ ತೆರಳಿ ಅಯ್ಯಪ್ಪನ ದರ್ಶನ ಪಡೆದಿದ್ದಾರೆ.