ದೇಶ

ಸ್ಟೆರ್ಲೈಟ್ ಪುನಾರಂಭ: ಎನ್ ಜಿಟಿ ಆದೇಶವನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಲು ತ.ನಾಡು ಸರ್ಕಾರ ತೀರ್ಮಾನ

Raghavendra Adiga
ಚೆನ್ನೈ: ತೂತುಕುಡಿಯಲ್ಲಿ  ತಾಮ್ರದ ಘಟಕವನ್ನು ಪುನಾರಂಭಿಸಲು ವೇದಾಂತ ಸ್ಟೆರ್ಲೈಟ್ ಗೆ ಅನುಮತಿನೀಡಿದ್ದ ರಾಷ್ಟ್ರೀಯ ಹಸಿರು ಪೀಠ (ಎನ್ ಜಿಟಿ) ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ತೀರ್ಮಾನಿಸಿದೆ.
ಡಿಸೆಂಬರ್ ನಲ್ಲಿ ವಿಚಾರಣೆ ನಡೆಸಿದ್ದ ಎನ್ ಜಿಟಿ ತೂತುಕುಡಿಯಲ್ಲಿ ಸ್ಟೆರ್ಲೈಟ್ ಘಟಕ ಮುಚುವ ರಾಜ್ಯ ಸರ್ಕಾರದ ಆದೇಶದ ವಿರುದ್ಧ ತೀರ್ಪು ಪ್ರಕಟಿಸಿದ್ದು ವೇದಾಂತ ಗ್ರೂಪ್ಸ್ ಗೆ ಘಟಕ ಪುನಾರಂಭಕ್ಕೆ ಅನುಮತಿ ನೀಡಿತ್ತು. ಅಲ್ಲದೆ ರಾಜ್ಯ ಸರ್ಕಾರದ ಆದೇಶ "ಅಸಮರ್ಥನೀಯ" ಎಂದಿತ್ತು. 
2018ರ ಮೇ ತಿಂಗಳಲ್ಲಿ ತೂತುಕುಡಿ ನಗರದಾದ್ಯಂತ ವೇದಾಂತ ಸ್ಟೆರ್ಲೈಟ್ ಘಟಕದ ವಿರುದ್ಧ ಪ್ರತಿಭಟನೆಗಳು ನಡೆದಿದ್ದು ಈ ವೇಳೆ ಪೋಲೀಸರು ನಡೆಸಿದ್ದ ಗುಂಡಿನ ದಾಳಿಯಿಂದ 13 ಜನ ಸಾವನ್ನಪ್ಪಿದ್ದರು. ಆದರೆ ಎನ್ ಜಿಟಿ ಡಿಸೆಂಬರ್ 15ರಂದು ನೀಡಿದ್ದ ಆದೇಶದಂತೆ ಘಟಕದ ಪುನಾರಂಭಕ್ಕೆ ಯಾವ ಅಡ್ಡಿ ಇಲ್ಲ ಎನ್ನಲಾಗಿದ್ದು ತನ್ನ ಆದೇಶದ ಬಳಿಕ ಮೂರು ವಾರಗಳಲ್ಲಿ ರಾಜ್ಯ ಸರ್ಕಾರ ಘಟಕದ ಪುನಾರಂಭಕ್ಕೆ ಅನುಮತಿ  ನೀಡಬೇಕೆಂದು ಹೇಳಿತ್ತು. 
ಇದೀಗ ಎನ್ ಜಿಟಿ ಆದೇಶವನ್ನು ರಾಜ್ಯವು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಲಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಡಪಾಡಿ ಕೆ. ಪಳನಿಸ್ವಾಮಿ ಹೇಳಿದ್ದಾರೆ.
ಇದಕ್ಕೆ ಮುನ್ನ ಎರಡು ಬಾರಿ ರಾಜ್ಯವು ಸುಪ್ರೀಂ ಮೆಟ್ಟಿಲೇರಿದೆ. ಆದರೆ ಎರಡೂ ಬಾರಿ ಕೋರ್ಟ್ ತಮಿಳುನಾಡು ರಾಜ್ಯದ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿತ್ತಲ್ಲದೆ ಈ ವಿವಾದ ಬಗೆಹರಿಸಲು ಎನ್ ಜಿಟಿಗೆ ಅಧಿಕಾರ ನೀಡಿತ್ತು.
SCROLL FOR NEXT