ದೇಶ

ಚೆನ್ನೈ: ಸರವಣ ಭವನ್, ಅಂಜಪ್ಪರ್, ಗ್ರ್ಯಾಂಡ್ ಸ್ವೀಟ್ಸ್ ಕಚೇರಿಗಳ ಮೇಲೆ ಐಟಿ ದಾಳಿ

Nagaraja AB

ಚೆನ್ನೈ : ಕರ್ನಾಟಕದಲ್ಲಿ ಸ್ಟಾರ್ ನಟರು ಹಾಗೂ ನಿರ್ಮಾಪಕರ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿರುವಂತೆ ಅತ್ತ ಚೆನ್ನೈಯಲ್ಲಿ  ನಾಲ್ಕು ಉನ್ನತ ಶ್ರೇಣಿಯ ರೆಸ್ಟೊರೆಂಟ್ ಗಳ ಮೇಲೆ ತೆರಿಗೆ ವಂಚನೆ ಆರೋಪದ ಮೇರೆಗೆ  ಐಟಿ ದಾಳಿ ನಡೆದಿದ್ದು,  32 ಕಡೆಗಳಲ್ಲಿ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿದೆ.

ಸರವಣ ಭವನ, ಅಂಜಪ್ಪರ್ , ಗ್ರ್ಯಾಂಡ್ ಸ್ವೀಟ್ಸ್ ಮತ್ತು ಹಾಟ್ ಬ್ರೆಡ್ಸ್ ರೆಸ್ಟೋರೆಂಟ್ ಗಳ ನಿರ್ದೇಶಕರುಗಳ  ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಲಾಗಿದ್ದು, ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚೆನ್ನೈಯಲ್ಲಿ ಈ ನಾಲ್ಕು ಪ್ರಸಿದ್ಧಿಯಾಗಿರುವ ರೆಸ್ಟೋರೆಂಟ್ ಗಳಾಗಿದ್ದು, ವಿದೇಶದಲ್ಲೂ ಶಾಖೆಗಳನ್ನು ಹೊಂದಿವೆ.

1981ರಲ್ಲಿ  ಪಿ ರಾಜಗೋಪಾಲ್ ಅವರಿಂದ ಸ್ಥಾಪನೆಯಾಗಿರುವ ಸರವಣ ಭವನ್ ಸಸ್ಯಹಾರಿ ಪ್ರಸಿದ್ಧ ರೆಸ್ಟೊರೆಂಟ್ ಆಗಿದೆ. 1964ರಲ್ಲಿ ಸ್ಥಾಪನೆಯಾಗಿರುವ ಅಂಜಪ್ಪರ್  70 ಕ್ಕೂ ಹೆಚ್ಚಿನ ಮಳಿಗೆಗಳಲ್ಲಿ ಸಾಂಪ್ರದಾಯಿಕ ಚೆಟ್ಟಿನಾಡ್ ತಿನಿಸುಗಳನ್ನು ನೀಡುತ್ತದೆ.

1982ರಲ್ಲಿ ಜಿ ನಟರಾಜನ್ ಎಂಬವರಿಂದ ಸ್ಥಾಪನೆಯಾಗಿರುವ  ಗ್ರಾಂಡ್ ಸ್ವೀಟ್ಸ್ ಮತ್ತು ಸ್ನ್ಯಾಕ್ಸ್   ರೆಸ್ಟೊರೆಂಟ್ ಗೆ ಚಿತ್ರ ನಿರ್ದೇಶಕ ಮಣಿರತ್ನಂ ಅವರಂತಹ ಪ್ರಸಿದ್ಧ ವ್ಯಕ್ತಿಗಳೇ ಹೆಚ್ಚಾಗಿ ಭೇಟಿ ನೀಡುತ್ತಾರೆ.

ಮದ್ರಾಸ್ ವಿಶ್ವವಿದ್ಯಾಲಯದ ಮಾಜಿ ಸಹಾಯಕ ಪ್ರೋಫೆಸರ್  ಎಂ. ಮಹದೇವನ್ ಅವರಿಂದ ಹಾಟ್ ಬ್ರೇಡ್ ರೆಸ್ಟೋರೆಂಟ್ ಸ್ಥಾಪನೆಯಾಗಿದ್ದು, ಅರ್ಥರ್ ಹೇಲೀಸ್ ಹೋಟೆಲ್ ನಿಂದ ಸ್ಪೂರ್ತಿಗೊಂಡು ಹೋಟೆಲ್ ಉದ್ಯಮ ಪ್ರವೇಶಿದ್ದಾಗಿ ಸಂದರ್ಶನವೊಂದರಲ್ಲಿ ಅವರು ಹೇಳಿಕೆ ನೀಡಿದ್ದರು.

SCROLL FOR NEXT