ದೇಶ

ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್, ಜೈ ಅನುಸಂಧಾನ್ ಎಂದ ಪ್ರಧಾನಿ ಮೋದಿ

Lingaraj Badiger
ಚಂಡಿಗಢ: ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು 'ಜೈ ಜವಾನ್, ಜೈ ಕಿಸಾನ್' ಎಂದು ಘೋಷಿಸುವ ಮೂಲಕ ದೇಶದಲ್ಲಿ ಯೋಧರಷ್ಟೇ ರೈತರೂ ಮುಖ್ಯ ಎಂದು ಪ್ರತಿಪಾದಿಸಿದ್ದರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಜೈ ವಿಜ್ಞಾನ್ ಎಂಬ ಪದ ಸೇರಿಸಿದ್ದರು. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ಅದಕ್ಕೆ ಜೈ ಅನುಸಂಧಾನ್ ಸೇರಿಸಿದ್ದಾರೆ. ಈ ಮೂಲಕ ಹೊಸ ಹೊಸ ಆವಿಷ್ಕಾರದ ಮಹತ್ವವನ್ನು ಸಾರಿದ್ದಾರೆ.
ಇಂದು ಜಲಂಧರ್ ನ 106ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಅನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್, ಜೈ ಅನುಸಂಧಾನ್ ಇವತ್ತಿನ ಹೊಸ ಘೋಷಣೆ. ಅದಕ್ಕೆ ನಾನು ಜೈ ಅನುಸಂಧಾನ್ ಸೇರಿಸಲು ಬಯಸುತ್ತೇನೆ ಎಂದರು.
ಭಾರತೀಯ ವಿಜ್ಞಾನಿಗಳ ಜೀವನ ಮತ್ತು ಕಾರ್ಯ, ತಂತ್ರಜ್ಞಾನ ಅಭಿವೃದ್ಧಿ ಮತ್ತು ರಾಷ್ಟ್ರ ನಿರ್ಮಾಣದೊಂದಿಗೆ ಆಳವಾಗಿ ಬೆಸೆದಿರುತ್ತದೆ. ವಿಜ್ಞಾನದ ನಮ್ಮ ಆಧುನಿಕ ದೇವಸ್ಥಾನಗಳ ಮೂಲಕ ಭಾರತ ತನ್ನ ಅಸ್ತಿತ್ವವನ್ನು ಮಾರ್ಪಡಿಸುತ್ತಿದೆ ಮತ್ತು ಅದರ ಭವಿಷ್ಯವನ್ನು ಭದ್ರಪಡಿಸುವ ಕೆಲಸ ಮಾಡುತ್ತಿದೆ ಎಂದರು. 
ವಿಜ್ಞಾನ ಮತ್ತು ಸಂಶೋಧನೆಯ ಮೂಲಕ ವಿಶ್ವದ ಮೂರು ಪ್ರಮುಖ ಆರ್ಥಿಕ ಮಹಾಶಕ್ತಿಶಾಲಿ ರಾಷ್ಟ್ರಗಳ ಪೈಕಿ ಭಾರತವೂ ಒಂದಾಗಬೇಕು. ವಿಜ್ಞಾನದ ಮೂಲಕ ನವ ಭಾರತ ನಿರ್ಮಾಣ ಕಾರ್ಯ ನಡೆಯಬೇಕು ಎಂದು ಪ್ರಧಾನಿ ಮೋದಿ ವಿಜ್ಞಾನಿಗಳಿಗೆ ಕರೆ ನೀಡಿದರು.
SCROLL FOR NEXT