ಬಿಜೆಪಿಯೇ ಶಿವಸೇನೆ ಮೈತ್ರಿ ತೊರೆಯಲಿದೆಯಾ?: ಮಹಾ ಸಂಸದರಿಗೆ ಶಾ ನೀಡಿದರು ಸುಳಿವು?
ಮುಂಬೈ: ರಾಮಮಂದಿರ ನಿರ್ಮಾಣ, ರಾಫೆಲ್ ಒಪ್ಪಂದ, ಬಿಜೆಪಿಯ ಚುನಾವಣಾ ಸೋಲು ಸೇರಿದಂತೆ ಹಲವು ವಿಷಯದಲ್ಲಿ ಶಿವಸೇನೆ ಪ್ರಧಾನಿ ನರೇಂದ್ರ ಮೋದಿ ಅವರ ಕಡು ಟೀಕಾಕಾರ ಪಕ್ಷವಾಗಿ ಇತ್ತೀಚಿನ ದಿನಗಳಲ್ಲಿ ಗುರುತಿಸಿಕೊಂಡಿದೆ. ಈಗ ಬಿಜೆಪಿಯೇ ಶಿವಸೇನೆ ಮೈತ್ರಿ ತೊರೆಯಲಿದೆಯಾ ಎಂಬ ಪ್ರಶ್ನೆಯನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನಡೆ ಹುಟ್ಟುಹಾಕಿದೆ.
ಜ.03 ರಂದು ಮಹಾರಾಷ್ಟ್ರ ಸಂಸದರೊಂದಿಗೆ ಸಭೆ ನಡೆಸಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಅಗತ್ಯವಿದ್ದಲ್ಲಿ, ಸಂಸತ್ ಚುನಾವಣೆಗೆ ಏಕಾಂಗಿಯಾಗಿ ಸ್ಪರ್ಧಿಸಲು ಸಿದ್ಧರಾಗಿರಿ ಎಂಬ ಸಂದೇಶ ರವಾನೆ ಮಾಡಿದ್ದಾರೆ. ಈ ಬಗ್ಗೆ ಮಹಾರಾಷ್ಟ್ರ ಸಂಸದರೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
"ಸಂಸತ್ ಚುನಾವಣೆಗೆ ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುವುದು ಆದರೆ ಅಗತ್ಯವಿದ್ದಲ್ಲಿ 48 ಲೋಕಸಭಾ ಕ್ಷೇತ್ರಗಳಲ್ಲಿಯೂ ಪಕ್ಷ ಏಕಾಂಗಿಯಾಗಿ ಚುನಾವಣೆ ಎದುರಿಸುವುದಕ್ಕೆ ನೀವು ಸಿದ್ಧತೆ ಮಾಡಿಕೊಳ್ಳಿ ಎಂದು ರಾಷ್ಟ್ರಾಧ್ಯಕ್ಷರು ಸೂಚನೆ ನೀಡಿದ್ದಾರೆ" ಎಂದು ಸಂಸದರೊಬ್ಬರು ಮಾಹಿತಿ ಬಹಿರಂಗಪಡಿಸಿದ್ದಾರೆ.
ಮಹಾರಾಷ್ಟ್ರ ಹಾಗೂ ಕೇಂದ್ರದಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಶಿವಸೇನೆ ಇತ್ತೀಚಿನ ದಿನಗಳಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಅಷ್ಟೇ ಅಲ್ಲದೇ ಶಿವಸೇನೆ ನಾಯಕರು ಲೋಕಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ಬಗ್ಗೆ ಹೇಳಿಕೆ ನೀಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics