ನವದೆಹಲಿ: ಅಯೋಧ್ಯೆ ರಾಮಮಂದಿರ ವಿವಾದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜನವರಿ 10 ಕ್ಕೆ ಮುಂದೂಡಿದೆ.
ರಾಮ ಜನ್ಮಭೂಮಿ-ಬಾಬ್ದ್ರಿ ಮಸೀದಿಯ ಹಕ್ಕು ವಿವಾದದ ಪ್ರಕರಣದ ವಿಚಾರಣೆಯ ದಿನಾಂಕವನ್ನು ಸೂಕ್ತವಾದ ನ್ಯಾಯಪೀಠ ಜ.10 ರಂದು ನಿರ್ಧರಿಸಲಿದೆ ಎಂದು ಕೋರ್ಟ್ ಹೇಳಿದೆ. ಇದೇ ನ್ಯಾಯಪೀಠ ಜ.10 ರಂದು ಪ್ರಕರಣಕ್ಕೆ ಸಂಬಂಧಪಟ್ಟ ಮುಂದಿನ ಆದೇಶಗಳಾನ್ನೂ ಪ್ರಕಟಿಸಲಿದೆ ಎಂದು ಹೇಳಿದೆ.
ವಿವಾದಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ನಡೆಸಲು ತ್ರಿಸದಸ್ಯ ಪೀಠವೂ ರಚನೆಯಾಗಲಿದೆ. ಆದರೆ ಇಷ್ಟೆಲ್ಲಾ ಸುಪ್ರೀಂ ಕೋರ್ಟ್ ಹೇಳಿದ್ದು ಕೇವಲ 30 ಸೆಕೆಂಡ್ ಗಳಲ್ಲಿ! ಹೌದು, ಜ.04 ರಂದು ಸುಪ್ರೀಂ ಕೋರ್ಟ್ ರಾಮ ಮಂದಿರ-ಬಾಬ್ರಿ ಮಸೀದಿ ಪ್ರಕರಣದ ವಿಚಾರಣೆಯನ್ನು ಮುಂದೂಡಲು ತೆಗೆದುಕೊಂಡಿದ್ದು ಕೇವಲ 30 ಸೆಕೆಂಡ್ ಗಳಷ್ಟು ಕಾಲಾವಕಾಶ ಮಾತ್ರ. ಇಲ್ಲಿ ಉಭಯ ಪಕ್ಷದ ವಕೀಲರಿಗೆ ವಾದ ಮಂಡನೆ ಮಾಡಲು ಅವಕಾಶವೂ ಸಿಗಲಿಲ್ಲ.
ಕಳೆದ ಅಕ್ಟೋಬರ್ ನಲ್ಲೇ ತ್ವರಿತವಾಗಿ ವಿಚಾರಣೆ ನಡೆಸುವಂತೆ ಅರ್ಜಿ ಸಲ್ಲಿಸಲಾಗಿತ್ತು. ರಾಮ ಮಂದಿರ ನಿರ್ಮಾಣಕ್ಕಾಗಿ ಸುಗ್ರೀವಾಜ್ಞೆ ಜಾರಿಗೆ ತರುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಕೇಳಿ ಬಂದಿದೆ. ಸಂಘ ಪರಿವಾರ, ಹಿಂದೂ ಸಂಘಟನೆಗಳು ಸುಗ್ರೀವಾಜ್ಞೆ ಅಥವಾ ಕಾನೂನನ್ನು ಜಾರಿಗೆ ಒತ್ತಾಯಿಸಿವೆ. 2.77 ಎಕರೆ ವಿಸ್ತೀರ್ಣದ ಭೂಮಿಯನ್ನು ಸದ್ಯಕ್ಕೆ ಸುನ್ನಿ ವಕ್ಫ್ ಬೋರ್ಡ್, ನಿರ್ಮೋಹಿ ಅಖಾರ ಹಾಗು ರಾಮ್ ಲಲ್ಲಾ ಸಮಾನಾಗಿ ಹೊಂದಿವೆ.