ನವದೆಹಲಿ: ಸದಾಕಾಲ ಭಾರತದ ಮೇಲೆ ದಾಳಿ ನಡೆಸಲು ಸಂಚು ರೂಪಿಸುತ್ತಿರುವ ಉಗ್ರರ ತಂಡಗಳು ಇದೀಗ ಜಮ್ಮು ಮತ್ತು ಕಾಶ್ಮೀರದೊಳಗೆ ನುಗ್ಗಲು ಹೊಸ ದಾರಿಗಳನ್ನು ಬಳಕೆ ಮಾಡುತ್ತಿರುವುದು ಜಮ್ಮು ಮತ್ತು ಕಾಶ್ಮೀರದಲ್ಲಿರುವ ಭದ್ರತಾ ಪಡೆಗಳು ಹಾಗೂ ಗುಪ್ತಚರ ಸಂಸ್ಥೆಗಳಿಗೆ ದೊಡ್ಡ ತಲೆನೋವಾಗಿ ಪರಿಗಣಿಸಿದೆ.
2018ರಲ್ಲಿ ಸಾಕಷ್ಟು ಉಗ್ರರನ್ನು ಹತ್ಯೆ ಮಾಡಿದ್ದರೂ ಈಗಲೂ ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವಾರು ಉಗ್ರರು ಗೌಪ್ಯವಾಗಿ ತಮ್ಮ ಕಾರ್ಯನಿರ್ವಹಿಸುತ್ತಿದ್ದಾರೆಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮುಖ್ಯಸ್ಥ ಹೇಳಿಕೆ ನೀಡಿದ್ದರು. ಮಂಜು ಬೀಳಿವ ಸಂದರ್ಭದಲ್ಲಿಯೇ ಉಗ್ರರು ಹೆಚ್ಚು ಭಾರತದೊಳಗೆ ಪ್ರವೇಶ ಮಾಡಲು ಯತ್ನ ನಡೆಸುತ್ತಿರುತ್ತಾರೆಂದು ಅಧಿಕಾರಿಗಳು ಹೇಳಿದ್ದಾರೆ.
ನಿನ್ನೆಯಷ್ಟೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಜಿಪಿ ದಿಲ್ಬಾಘ್ ಸಿಂಗ್ ಅವರು, ಜಮ್ಮು ಮತ್ತು ಕಾಶ್ಮೀರದಲ್ಲಿ ಈಗಲೂ 300 ಉಗ್ರರು ತಮ್ಮ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಕಳೆದ ವರ್ಷ 257 ಉಗ್ರರನ್ನು ಹತ್ಯೆ ಮಾಡಲಾಗಿತ್ತು. ಕಳೆದ 10 ವರ್ಷಗಳಿಗೆ ಹೋಲಿಕೆ ಮಾಡಿದರೆ, ಕಳೆದ ವರ್ಷವೇ ಹೆಚ್ಚು ಉಗ್ರರನ್ನು ಹತ್ಯೆ ಮಾಡಲಾಗಿದೆ. 2018ರಲ್ಲಿ 182 ಉಗ್ರರನ್ನು ಉಗ್ರ ಸಂಘಟನೆಗಳು ನೇಮಕ ಮಾಡಿಕೊಂಡಿರುವುದಾಗಿ ಗುಪ್ತಚರ ಮೂಲಗಳು ಮಾಹಿತಿ ನೀಡಿವೆ ಎಂದು ತಿಳಿಸಿದ್ದಾರೆ.
ಪೂಂಚ್ ಹಾಗೂ ರಜೌರಿಯಲ್ಲಿ ಕಳೆದ 3 ತಿಂಗಳಿನಿಂದ ಗಡಿ ನುಸುಳುವಿಕೆ ನಡೆಯದಂತೆ ನೋಡಿಕೊಳ್ಳಲಾಗಿದೆ. ಆದರೂ, ಜಮ್ಮು ಮತ್ತು ಕಾಶ್ಮೀರದಲ್ಲಿ ಇಷ್ಟರ ಮಟ್ಟಿಗೆ ಉಗ್ರರು ಕಾರ್ಯನಿರ್ವಹಿಸುತ್ತಿರುವುದನ್ನು ನೋಡಿದರೆ, ಉಗ್ರರು ಹೊಸ ಮಾರ್ಗದಿಂದ ಜಮ್ಮು-ಕಾಶ್ಮೀರಕ್ಕೆ ನುಗ್ಗುತ್ತಿರುವ ಬಗ್ಗೆ ಶಂಕೆಗಳು ಮೂಡತೊಡಗಿವೆ.
ಪಾಕಿಸ್ತಾನದ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಗಳು ರಣ್ಬೀರ್ ಸಿಂಗ್ ಪುರಾ ಹಾಗೂ ರಾಮ್ಗರ್ಹ್ ಸೆಕ್ಟರ್ ಮೇಲೆ ಕಣ್ಣಿದೆ ಎಂದು ಗುಪ್ತಚರ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಗಡಿ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲು ನಾವು ಯತ್ನಿಸುತ್ತಿದ್ದೇವೆಂದು ಸಿಂಗ್ ಹೇಳಿದ್ದಾರೆ.