ನವದೆಹಲಿ: ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಸತತ ಮೂರು ತಿಂಗಳಿನಿಂದ ಶಬರಿಮಲೆಯಲ್ಲಿ ನಡೆಯುತ್ತಿರುವ ಪ್ರತಿಭಟನೆ ತಾರಕಕ್ಕೇರಿರುವಂತೆಯೇ ಇತ್ತ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು, ಶಬರಿಮಲೆ ಸಂಪ್ರದಾಯ ರಕ್ಷಣೆಯಾಗಬೇಕು ಎಂಬ ವಾದದಲ್ಲಿ ಅರ್ಥವಿದೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಈ ಹಿಂದೆ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಣೆಯಾದ ಬಳಿಕ ಮಹಿಳೆಯರಿಗೂ ಸಮಾನ ಹಕ್ಕಿದೆ ಎಂದು ಹೇಳುವ ಮೂಲಕ ಶಬರಿಮಲೆಗೆ ಮಹಿಳೆಯರ ಪ್ರವೇಶವನ್ನು ಪರೋಕ್ಷವಾಗಿ ಸ್ವಾಗತಿಸಿದ್ದ ರಾಹುಲ್ ಗಾಂಧಿ, ಇದೀಗ ಲೋಕಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಶಬರಿಮಲೆ ಸಂಪ್ರದಾಯದ ಪರವಾಗಿ ಮಾತನಾಡಿದ್ದಾರೆ.
ಪ್ರಸ್ತುತ ದುಬೈ ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಈ ಬಗ್ಗೆ ಮಾತನಾಡಿದ್ದು, ಶಬರಿಮಲೆ ಸಂಪ್ರದಾಯ ರಕ್ಷಣೆಯಾಗಬೇಕು ಎಂಬ ವಾದದಲ್ಲಿ ಅರ್ಥವಿದೆ. ಅಂತೆಯೇ ಮಹಿಳೆಯರಿಗೂ ಸಮಾನ ಹಕ್ಕು ನೀಡಬೇಕು ಎಂದೂ ವಾದಿಸಿದ್ದಾರೆ. ಕೇರಳದಲ್ಲಿರುವ ನಮ್ಮ ತಂಡದೊಂದಿಗೆ ನಾನು ಚರ್ಚೆ ನಡೆಸಿದ್ದು, ಅಲ್ಲಿನ ಪ್ರಜೆಗಳ ಅಭಿಪ್ರಾಯ ಕೂಡ ಸಂಗ್ರಹಿಸಿದ್ದೇವೆ. ಈ ವೇಳೆ ಎರಡೂ ಬಣದ ವಾದಗಳೂ ಸರಿ ಇವೆ. ಹೀಗಾಗಿ ಈ ವಿಷಯದಲ್ಲಿ ಸರಿಯಾದ ನಿರ್ಣಯ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಅಭಿಪ್ರಾಯವನ್ನು ಬದಲಿಸಿಕೊಂಡಿರುವುದಾಗಿ ದುಬೈನಲ್ಲಿ ನಡೆದ ಅನಿವಾಸಿ ಭಾರತೀಯ ಸಮಾವೇಶದಲ್ಲಿ ಹೇಳಿಕೊಂಡಿದ್ದಾರೆ. ಯಾವುದೇ ಸಂಪ್ರದಾಯಕ್ಕೂ ಅದದ್ದೇ ಆದ ಹಿನ್ನೆಲೆ ಇರುತ್ತದೆ. ನಾವು ಮೊದಲು ಎಲ್ಲ ವಯೋಮಾನದ ಮಹಿಳೆಯರು ಅಯ್ಯಪ್ಪಸ್ವಾಮಿಯ ದರ್ಶನ ಪಡೆಯಬೇಕೆಂಬ ವಾದಕ್ಕೆ ಬೆಂಬಲ ಸೂಚಿಸಿದ್ದೆವು. ಆದರೆ, ಅಯ್ಯಪ್ಪಸ್ವಾಮಿ ದೇವಸ್ಥಾನದ ಭಕ್ತರ ವಾದದಲ್ಲಿಯೂ ಸತ್ಯವಿದೆ ಎಂದು ನನಗೀಗ ಅನಿಸುತ್ತಿದೆ ಎಂದಿದ್ದಾರೆ.
ಶಬರಿಮಲೆಗೆ ಎಲ್ಲ ವಯೋಮಾನದ ಮಹಿಳೆಯರ ಪ್ರವೇಶದ ಪರವಾಗಿ ಮಾತನಾಡುತ್ತಿರುವವರ ಮತ್ತು ವಿರೋಧಿಸುತ್ತಿರುವವರ ಇಬ್ಬರ ವಾದದಲ್ಲಿಯೂ ಕೆಲವೊಂದಷ್ಟು ಒಪ್ಪಬಹುದಾದ ಅಂಶಗಳಿವೆ. ಹೀಗಾಗಿ, ಒಂದೇ ನಿಲುವಿಗೆ ಬರಲು ಕಷ್ಟವಾಗುತ್ತದೆ. ನಾವು ಹೊರಗಿನವರು ಈ ಬಗ್ಗೆ ಏನೇ ಸಮರ್ಥನೆಗಳನ್ನು ನೀಡಿದರೂ ಅದು ವ್ಯರ್ಥ. ಕೇರಳದ ಜನರು ಈ ವಿಚಾರವಾಗಿ ನಿರ್ಧಾರ ತೆಗೆದುಕೊಳ್ಳಬೇಕು ಎಂದಿದ್ದಾರೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆ ವರದಿ ಮಾಡಿದೆ.
ಕೇರಳದ ಸಂಪ್ರದಾಯಸ್ಥ ಜನರ ಮಾತುಗಳನ್ನು ಕೇಳಿದ ನಂತರ ನಾನು ನನ್ನ ಮನಸ್ಥಿತಿಯನ್ನು ಬದಲಾಯಿಸಿಕೊಂಡಿದ್ದೇನೆ. ಎಲ್ಲ ಆಚರಣೆಗಳಿಗೂ ಒಂದು ಕಾರಣವಿರುತ್ತದೆ. ಎರಡೂ ಕಡೆಯವರ ವಾದಗಳನ್ನು ಕೇಳಿರುವ ನನಗೆ ನಿಲುವು ತಳೆಯಲು ಸಾಧ್ಯವಾಗುತ್ತಿಲ್ಲ. ಇಬ್ಬರ ಮಾತು, ನಂಬಿಕೆಯಲ್ಲಿಯೂ ಸತ್ಯವಿದೆ ಎಂದು ಇಬ್ಬಂದಿತನದ ಹೇಳಿಕೆ ನೀಡಿದ್ದಾರೆ.
ಚುನಾವಣೆ ಸಮೀಪಿಸುತ್ತಿರುವುದರಿಂದ ಹಿಂದು ವಿರೋಧಿ ಪಕ್ಷ ಎಂದು ಕರೆಸಿಕೊಳ್ಳುತ್ತಿರುವ ಕಾಂಗ್ರೆಸ್ ಹಿಂದುವಾದಿಗಳ ಪರವಾಗಿ ಮೃದು ಧೋರಣೆ ತಳೆಯಲಾರಂಭಿಸಿದೆ ಎಂಬ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಆ ಕಾರಣದಿಂದಲೇ ಇತ್ತೀಚೆಗೆ ನಾನಾ ದೇವಸ್ಥಾನಗಳಿಗೆ ಭೇಟಿ ನೀಡುತ್ತಿರುವ ರಾಹುಲ್ ಗಾಂಧಿ ಇದೀಗ ಸಂಪ್ರದಾಯವಾದಿಗಳ ಪರವಾಗಿ ಮಾತನಾಡುವ ಮೂಲಕ ಚುನಾವಣಾ ತಂತ್ರ ರೂಪಿಸುತ್ತಿದ್ದಾರೆ ಎನ್ನಲಾಗುತ್ತಿದೆ
ಕಳೆದ ಸೆಪ್ಟೆಂಬರ್ ನಲ್ಲಿ ಈ ಬಗ್ಗೆ ತನ್ನ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್ ಎಲ್ಲ ವಯಸ್ಸಿನ ಹೆಣ್ಣುಮಕ್ಕಳೂ ದೇಗುಲ ಪ್ರವೇಶ ಮಾಡಬಹುದು ಎಂದು ತೀರ್ಪು ನೀಡಿತ್ತು. ಈ ತೀರ್ಪಿನ ಬಳಿಕ ಶಬರಿ ಮಲೆಯಲ್ಲಿ ಪ್ರತಿಭಟನೆ ತೀವ್ರವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics