ದೇಶ

ಶಬರಿಮಲೆಗೆ ಹೋಗಲು ಯತ್ನಿಸಿದ ಇಬ್ಬರು ಮಹಿಳೆಯರನ್ನು ಹಿಂದಕ್ಕೆ ಕಳುಹಿಸಿದ ಪ್ರತಿಭಟನಾಕಾರರು

Sumana Upadhyaya

ಶಬರಿಮಲೆ: ಅಯ್ಯಪ್ಪ ದೇವಾಲಯ ಪ್ರವೇಶಿಸಲು ಯತ್ನಿಸಿದ 50 ವರ್ಷಕ್ಕಿಂತ ಕೆಳಗಿನ ಇಬ್ಬರು ಮಹಿಳೆಯರನ್ನು ನೀಲಿಮಾಲ ಬೆಟ್ಟದ ಬಳಿ ತಡೆದ ಘಟನೆ ಬುಧವಾರ ಮುಂಜಾನೆ ನಡೆದಿದೆ.

ಕಣ್ಣೂರಿನ ರೇಶ್ಮಾ ನಿಶಾಂತ್ ಮತ್ತು ಕೊಲ್ಲಮ್ ನ ಶನಿಲಾ ಅವರು ಅಯ್ಯಪ್ಪ ದೇವಸ್ಥಾನಕ್ಕೆ ಹೋಗಲು ಯತ್ನಿಸಿದ್ದರು. ಇಂದು ನಸುಕಿನ ಜಾವ 4 ಗಂಟೆ ಸುಮಾರಿಗೆ ಪಾಂಬಾ ತಲುಪಿದ್ದ ಇವರಿಬ್ಬರೂ ಪೊಲೀಸರ ರಕ್ಷಣೆಯೊಂದಿಗೆ ಅಯ್ಯಪ್ಪನ ಸನ್ನಿಧಿಗೆ ಹೋಗಲು 4.30ಕ್ಕೆ ಬೆಟ್ಟ ಹತ್ತಲು ಆರಂಭಿಸಿದ್ದರು. ನೀಲಿಮಾಗೆ ತಲುಪಿದಾಗ ಅಯ್ಯಪ್ಪನ ದರ್ಶನ ಮಾಡಿ ಹಿಂತಿರುಗುತ್ತಿದ್ದ ಇಬ್ಬರು ಇಬ್ಬರನ್ನೂ ತಡೆದು ಅಯ್ಯಪ್ಪನ ಭಜನೆ ಮತ್ತು ಮಂತ್ರವನ್ನು ಪಠಿಸಲಾರಂಭಿಸಿದರು.

ತಕ್ಷಣವೇ ಶಬರಿಮಲೆ ಕರ್ಮ ಸಮಿತಿಯ ಸದಸ್ಯರು ಒಟ್ಟು ಸೇರಿ ಮಹಿಳೆಯರು ಮುಂದೆ ಪ್ರಯಾಣ ಬೆಳೆಸದಂತೆ ತಡೆದು ಪ್ರತಿಭಟನೆ ನಡೆಸಲು ಆರಂಭಿಸಿದರು. ಆಗ ಇಬ್ಬರೂ ರಸ್ತೆಯಲ್ಲಿಯೇ ಕುಳಿತು ಪ್ರತಿಭಟನಾಕಾರರನ್ನು ತೆರವುಗೊಳಿಸಿ ತಮಗೆ ಅಯ್ಯಪ್ಪನ ಸನ್ನಿಧಿಗೆ ತೆರಳಲು ಅನುವು ಮಾಡಿಕೊಡಬೇಕೆಂದು ಪಟ್ಟು ಹಿಡಿದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ರೇಶ್ಮಾ ನಿಶಾಂತ್, ಕಳೆದ ಎರಡು ತಿಂಗಳಿನಿಂದ ಉಪವಾಸ ಕುಳಿತು ಬೆಟ್ಟ ಹತ್ತುತ್ತಿದ್ದು ಅಯ್ಯಪ್ಪನ ದರ್ಶನ ಮಾಡದೆ ಹಿಂತಿರುಗುವುದಿಲ್ಲ ಎಂದು ಪಟ್ಟು ಹಿಡಿಯುತ್ತಿದ್ದಾರೆ. ಆದರೆ ನೂರಾರು ಮಂದಿ ಪ್ರತಿಭಟನೆ ನಡೆಸುತ್ತಿರುವುದರಿಂದ ಪೊಲೀಸರಿಗೆ ಪರಿಸ್ಥಿತಿಯನ್ನು ನಿಭಾಯಿಸುತ್ತಿರುವುದು ಕಷ್ಟವಾಗುತ್ತಿದೆ.

ಶಬರಿಮಲೆಗೆ ಇಬ್ಬರು ಮಹಿಳೆಯರು ಹತ್ತಲು ನೋಡುತ್ತಿದ್ದಾರೆ ಎಂಬ ವಿಷಯ ಹರಡುತ್ತಿದ್ದಂತೆ ಪಂಬಾ ಮತ್ತು ಸನ್ನಿಧಾನದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಇಂದು ನಸುಕಿನ ಜಾವ 7 ಮಂದಿ ಮಹಿಳೆಯರು ಬೆಟ್ಟ ಹತ್ತಲೆಂದು ಬಂದಾಗ ಅವರನ್ನು ತಂಡ ತಂಡವಾಗಿ ಹೋಗುವಂತೆ ಮತ್ತು ರಕ್ಷಣೆ ಭದ್ರತೆ ನೀಡುವುದಾಗಿ ಪೊಲೀಸರು ಭರವಸೆ ನೀಡಿದ್ದರು.

ಇದೀಗ 28 ವರ್ಷದ ಶನಲಾ ಸಾಜೇಶ್ ಮತ್ತು 30 ವರ್ಷದ ರೇಷ್ಮಾ ನಿಶಾಂತ್ ಅವರನ್ನು ಪಂಬಾ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ.

SCROLL FOR NEXT