ದೇಶ

ಗೌರಿ ಲಂಕೇಶ್ ಹತ್ಯೆ ತನಿಖೆ ನೆಚ್ಚಿಕೊಳ್ಳಬೇಡಿ, ಸ್ವತಂತ್ರ ತನಿಖೆ ನಡೆಸಿ: ಸಿಬಿಐ, ಸಿಐಡಿಗೆ ಹೈಕೋರ್ಟ್‌ ಚಾಟಿ

Lingaraj Badiger
ಮುಂಬೈ: ವಿಚಾರವಾದಿ ನರೇಂದ್ರ ದಾಬೋಲ್ಕರ್‌ ಹಾಗೂ ಎಡ ಪಂಥೀಯ ನಾಯಕ ಗೋವಿಂದ್ ಪನ್ಸಾರೆ ಹತ್ಯೆ ಪ್ರಕರಣದ ತನಿಖೆಯಲ್ಲಿ  ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ತನಿಖೆಯ ಅಂಶಗಳನ್ನು ನೆಚ್ಚಿಕೊಳ್ಳದೆ ಸ್ವತಂತ್ರವಾಗಿ ತನಿಖೆ ನಡೆಸುವಂತೆ ಸಿಬಿಐ ಮತ್ತು ಮಹಾರಾಷ್ಟ್ರ ಸಿಐಡಿಗೆ ಬಾಂಬೆ ಹೈಕೋರ್ಟ್‌ ಗುರುವಾರ ಆದೇಶಿಸಿದೆ.
ದಾಭೋಲ್ಕರ್‌ ಹಾಗೂ ಪನ್ಸಾರೆ ಹತ್ಯೆ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿ ಎಂದು ನ್ಯಾಯಮೂರ್ತಿಗಳಾದ ಎಸ್‌.ಸಿ. ಧರ್ಮಾಧಿಕಾರಿ ಹಾಗೂ ಎಂ. ಎಸ್‌. ಕಾರ್ಣಿಕ್‌ ಅವರನ್ನು ಒಳಗೊಂಡ ಹೈಕೋರ್ಟ್ ಪೀಠ, ಸಿಬಿಐ ಮತ್ತು ಸಿಐಡಿಗೆ ಚಾಟಿ ಬೀಸಿದೆ.
ಮಹಾರಾಷ್ಟ್ರ ಸಿಐಡಿ ರಚಿಸಿದ್ದ ವಿಶೇಷ ತನಿಖಾ ತಂಡ (ಎಸ್‌ಐಟಿ) ಇಂದು ದಾಭೋಲ್ಕರ್‌ ಮತ್ತು ಪನ್ಸಾರೆ ಕೊಲೆ ಪ್ರಕರಣದ ತನಿಖೆಯಲ್ಲಿ ಆಗಿರುವ ಪ್ರಗತಿಯ ವರದಿಯನ್ನು ಕೋರ್ಟಿಗೆ ಸಲ್ಲಿಸಿದೆ. ಈ ವೇಳೆ ಕೋರ್ಟ್ ತನಿಖಾ ಸಂಸ್ಥೆಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಗೌರಿ ಲಂಕೇಶ್‌ ಕೊಲೆ ಪ್ರಕರಣದಲ್ಲಿ ಕರ್ನಾಟಕದ ತನಿಖಾಧಿಕಾರಿಗಳು ಬಂಧಿಸಿರುವವರನ್ನು ತಾವು ದಾಭೋಲ್ಕರ್‌ಮತ್ತು ಪನ್ಸಾರೆ ಕೊಲೆ ಕೇಸಿಗೆ ಸಂಬಂಧಪಟ್ಟಂತೆ ಪ್ರಶ್ನಿಸುತ್ತಿದ್ದೇವೆ ಎಂದು ಎಸ್‌ಐಟಿ ಕೋರ್ಟಿಗೆ ತಿಳಿಸಿದಾಗ, 'ನಿಮ್ಮ ತನಿಖೆಯನ್ನು ನೀವು ಸ್ವತಂತ್ರವಾಗಿ ಮಾಡಿ; ಅನ್ಯರನ್ನು ನೆಚ್ಚಿಕೊಳ್ಳಬೇಡಿ' ಎಂದು ಕೋರ್ಟ್ ಹೇಳಿದೆ.
ಈ ಹಿಂದಿನ ವಿಚಾರಣೆಯಲ್ಲೂ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸುವುದಾಗಿ ಹೇಳಿದ್ದೀರಿ. ಆದರೆ ಎಸ್‌ಐಟಿ ಪ್ರಗತಿ ವರದಿಯಲ್ಲಿ  ಪರಾರಿಯಾಗಿರುವ ಆರೋಪಿಗಳ ಬಂಧನಕ್ಕೆ ಅದು ತೆಗೆದುಕೊಂಡಿರುವ ಯಾವುದೇ ಕ್ರಮಗಳ ನಿಖರ ವಿವರಗಳಿಲ್ಲ ' ಎಂದು ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ನಮ್ಮ ಅಧಿಕಾರಿಗಳು ಪರಾರಿಯಾಗಿರುವ ಆರೋಪಿಗಳನ್ನು ಪತ್ತೆ ಹಚ್ಚುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು ಸಿಬಿಐ ಪರ ವಕೀಲರಾದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅನಿಲ್‌ ಸಿಂಗ್‌ ಕೋರ್ಟ್ ಗೆ ತಿಳಿಸಿದ್ದಾರೆ.
SCROLL FOR NEXT