ಭಾರತದಲ್ಲೇ ಪ್ರಥಮ! ಏರ್-ಟುಏರ್ ಕ್ಷಿಪಣಿ ದಾಳಿ ನಡೆಸುವ ಲಘು ಹೆಲಿಕಾಪ್ಟರ್ ಸೇನಾ ಬಳಕೆಗೆ ಸಿದ್ದ
ಬೆಂಗಳೂರು: ಎಚ್‌ಎಎಲ್ ನಿರ್ಮಿತ ಅಭಿವೃದ್ಧಿ ಹೊಂದಿದ ಲಘು ಯುದ್ಧ ಹೆಲಿಕಾಪ್ಟರ್ ಈಗ ಸೇನಾ ಬತ್ತಳಿಕೆ ಸೇರಲು ಸಿದ್ದವಾಗಿದೆ. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್ ) ವಿನ್ಯಾಸಗೊಳಿಸಿರುವ ದ ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್ (ಎಲ್ಸಿಎಚ್) ಏರ್-ಟು ಏರ್ ಶಸ್ತ್ರಾಸ್ತ್ರ ಪರೀಕ್ಷೆಗಳನ್ನು ಯಶಸ್ವಿಯಾಗಿ ಮುಗಿಸಿದ್ದು ಸೇನೆಗೆ ಸೇರ್ಪಡೆಗೊಳ್ಳಲು ಸನ್ನದ್ದವಾಗಿದೆ. ವಿಶೇಷವೆಂದರೆ ದೇಶದಲ್ಲೇ ಇಂತಹಾ ವಿಮಾನ ತಯಾರಾಗುತ್ತಿರುವುದು ಇದೇ ಮೊದಲನೆಯದಾಗಿದೆ.
ಭಾರತೀಯ ವಾಯುಪಡೆಯ ಕಾರ್ಯಾಚರಣೆಯ ಅಗತ್ಯಗಳಿಗೆ ತಕ್ಕಂತೆ ಸಾರ್ವಜನಿಕ ವಲಯ ಸಂಸ್ಥೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ವಿನ್ಯಾಸ ಮತ್ತು ಅಭಿವೃದ್ಧಿಪಡಿಸಿದ ಎಲ್ಸಿಎಚ್ ಇದೇ ವರ್ಗಕ್ಕೆ ಸೇರಿದ ಇತರೆ ಹೆಲಿಕಾಪ್ಟರ್ ಗಳ ಸಾಮರ್ಥ್ಯಕ್ಕಿಂತ ಹೆಚ್ಚಾಗಿದೆ.
"ಇತ್ತೀಚೆಗೆ ಒಡಿಶಾದ ಚಂಡಿಪುರದಲ್ಲಿ ನಡೆಸಿದ ಪರೀಕ್ಷೆ ವೇಳೆ ವೈಮಾನಿಕ ಗುರಿಯ ಮೇಲೆ ನೇರವಾದ ದಾಳಿ ಮಾಡುವಲ್ಲಿ ಹಾಗೂ ಎದುರಾಳಿಯನ್ನು ಸಂಪೂರ್ಣವಾಗಿ ನಾಶಪಡಿಸುವಲ್ಲಿ ಕಾಪ್ಟರ್ ಯಶಸ್ವಿಯಾಗಿದೆ" ಎಂದು ಚ್ಎಎಲ್ ವಕ್ತಾರ ಗೋಪಾಲ್ ಸುತಾರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
"ದೇಶದಲ್ಲಿ ಮೊದಲ ಬಾರಿಗೆ ಹೆಲಿಕಾಪ್ಟರ್ ಏರ್-ಟು-ಏರ್ ಕ್ಷಿಪಣಿ ಕಾರ್ಯಾಚರಣೆ ನಡೆದಿದೆ.ಹಾಗೂ ದೇಶದ ಮಿಲಿಟರಿ ಸೇವೆಯಲ್ಲಿನ ಯಾವುದೇ ಕಾಪ್ಟರ್ ಇಂತಹಾ ಸಾಮರ್ಥ್ಯ ಪಡೆದಿರಲಿಲ್ಲ" ಎಂದು ಎಚ್ಎಎಲ್ ಮುಖ್ಯಸ್ಥ ಆರ್.ಮಾಧವನ್ ಹೇಳಿದರು " ಎಲ್ಎಚ್ಎಚ್ ಎಲ್ಲಾ ಶಸ್ತ್ರ ಸಮನ್ವಯ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ ಮತ್ತು ಸೇಬಾ ಕಾರ್ಯಾಚರಣೆಗೆ ಸಿದ್ದವಾಗಿದೆ" ಅವರು ಹೇಳಿದ್ದಾರೆ.
ವಿವಿಧ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹಾಗೂ ಅತಿ ಕಡಿಮೆ ಮಟ್ಟದಲ್ಲಿ ಹಾರಾಡುವ ಸಾಮರ್ಥ್ಯ ಹೊಂದಿರುವ ಎಲ್ಸಿಎಚ್ ಎಲ್ಲಾ ಬಗೆಯ ವೈಮಾನಿಕ ದಾಳಿಗಳಿಂದ ರಕ್ಷಣೆ ಒದಗಿಸುವಲ್ಲಿ ಸೇನೆಗೆ ನೆರವಾಗಲಿದೆ. ರಕ್ಷಣಾ ಅಕ್ವಿಸಿಷನ್ ಕೌನ್ಸಿಲ್ (ಡಿಎಸಿ) ಐಎಎಫ್ ಗಾಗಿ 10 ಸೇನೆಗಾಗಿ 5 ಒಟ್ಟು 15 ಎಲ್ಸಿಎಚ್ ಖರೀದಿಗೆ ಅನುಮೋದನೆ ನೀಡಿದೆ.
ಸಿಯಾಚಿನ್ ಗ್ಲೇಶಿಯರ್ ನಂತಹಾ ಎತ್ತರದ ಪ್ರದೇಶಗಳಲ್ಲಿ ಸಹ ಕಾರ್ಯಾಚರಣೆಗಿಳಿಯಬಲ್ಲ ದೇಶದ ಏಕೈಕ ಕಾಪ್ಟರ್ ಇದಾಗಿದೆ ಎಂದು ಎಚ್ಎಎಲ್ ಹೇಳಿದೆ.