ದೇಶ

ಮೇಘಾಲಯ ಗಣಿ ದುರಂತ: ಒಂದು ತಿಂಗಳ ನಂತರ ಓರ್ವ ಕಾರ್ಮಿಕನ ಮೃತ ದೇಹ ಪತ್ತೆ

Srinivas Rao BV
ಮೇಘಾಲಯ: ಮೇಘಾಲಯದಲ್ಲಿ ಗಣಿ ದುರಂತ ಸಂಭವಿಸಿ ಬರೊಬ್ಬರಿ 1 ತಿಂಗಳಾದ ನಂತರ ನೌಕಾದಳ ಹಾಗೂ ಎನ್ ಡಿ ಆರ್ ಎಫ್ ಸಿಬ್ಬಂದಿಗಳು ಓರ್ವ ಕಾರ್ಮಿಕನ ಮೃತದೇಹವನ್ನು ಹೊರತೆಗೆದಿದ್ದಾರೆ.
ನೀರಿನಡಿಯಲ್ಲಿ ವಸ್ತುಗಳನ್ನು ಗುರುತಿಸಲು ವಿಶೇಷವಾಗಿ ವಿನ್ಯಾಸ ಮಾಡಲಾಗಿರುವ ಯುಡಬ್ಲ್ಯುಆರ್ ಒವಿ ಯಂತ್ರದ ಸಹಾಯದ ಮೂಲಕ ಮೇಘಾಲಯದ ಜೈಂತಿಯಾ ಹಿಲ್ಸ್ ನಲ್ಲಿ ಸಿಲುಕಿ ಮೃತಪಟ್ಟ ಗಣಿ ಕಾರ್ಮಿಕನ ದೇಹವನ್ನು ಪತ್ತೆ ಮಾಡಿ ಹೊರತೆಗೆಯಲಾಗಿದೆ. ಇನ್ನೂ ಸಿಲುಕಿಕೊಂಡಿರುವ ಕಾರ್ಮಿಕರ ಮೃತ ದೇಹಗಳಿಗಾಗಿ ಶೋಧಕಾರ್ಯಾಚರಣೆ ಮುಂದುವರೆದಿದೆ. 
ಅಕ್ರಮ ಗಣಿಗಾರಿಕೆ ನಡೆಸಲು ಭೂಮಿಯ ಆಳಕ್ಕೆ ಇಳಿದಿದ್ದ 15 ಕಾರ್ಮಿಕರು ನದಿ ಸಮೀಪದಲ್ಲೆ ಭೂಮಿ ಅಗೆದಾಗ ನದಿಯ ನೀರು ಇವರಿದ್ದ ಪ್ರದೇಶವನ್ನು ಆವರಿಸಿಕೊಂಡಿದೆ. ಗಣಿಗಾರಿಕೆ ನಡೆಯುತ್ತಿದ್ದ ಪ್ರದೇಶದಲ್ಲಿ ಸುಮಾರು 350 ಅಡಿ ಕೆಳಗಿನಿಂದ ಕೋಟ್ಯಂತರ ಲೀಟರ್ ನಷ್ಟು ನೀರನ್ನು ಹೊರ ತೆಗೆಯಲಾಗಿದೆಯಾದರೂ ಯಾವುದೇ ಬದಲಾವಣೆಯಾಗಿಲ್ಲ ಎಂದು ರಕ್ಷಣಾ ಸಿಬ್ಬಂದಿಗಳು ಹೇಳಿದ್ದಾರೆ. 
ಡಿ.13 ರಂದು ಕಾರ್ಮಿಕರು ನೀರಿನಲ್ಲಿ ಸಿಲುಕಿದ್ದರು. ಒಟ್ಟಾರೆ 20 ಗಣಿಕಾರ್ಮಿಕರು ಒಳಗಿದ್ದರು ಈ ಪೈಕಿ 5 ಮಾತ್ರ ಮೇಲೆ ಬರಲು ಸಾಧ್ಯವಾಗಿದ್ದು 15 ಜನ ಅಲ್ಲೇ ಸಿಲುಕಿದ್ದರು. 
SCROLL FOR NEXT