ದೇಶ

ಪ್ರತಿಪಕ್ಷಗಳ ಗುರಿ ಒಂದೆಯಾಗಿರಬೇಕು, ಅದು ಬಿಜೆಪಿಯನ್ನು ಕಿತ್ತೊಗೆಯಬೇಕು: ಅರುಣ್ ಶೌರಿ

Lingaraj Badiger
ಕೋಲ್ಕತಾ: ಪ್ರತಿಪಕ್ಷಗಳಿಗೆ ಕೇವಲ ಒಂದೇ ಒಂದು ಗುರಿ ಇರಬೇಕು. ಅದು ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಬೇಕು ಎಂದು ಮಾಜಿ ಕೇಂದ್ರ ಸಚಿವ ಹಾಗೂ ಅತೃಪ್ತ ಬಿಜೆಪಿ ನಾಯಕ ಅರುಣ್ ಶೌರಿ ಅವರು ಶನಿವಾರ ಹೇಳಿದ್ದಾರೆ.
ಇಂದು ಪ್ರತಿಪಕ್ಷಗಳ ಶಕ್ತಿ ಪ್ರದರ್ಶನಕ್ಕಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಆಯೋಜಿಸಿರುವ ಒಕ್ಕೂಟ ಭಾರತ ಸಮಾವೇಶದಲ್ಲಿ ಮಾತನಾಡಿದ ಶೌರಿ, ನಮಗೆ (ಪ್ರತಿಪಕ್ಷಗಳು ಮತ್ತು ಮುಖಂಡರು) ಕೇವಲ ಒಂದೇ ಒಂದು ಗುರಿ.. ಅದೇನೆಂದರೆ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಕಿತ್ತೊಗೆಯಬೇಕು. ದೇಶಕ್ಕಾಗಿ ನಾವು ತ್ಯಾಗ ಮಾಡಲೇಬೇಕಾಗಿದ್ದು, ಅದನ್ನು ನಾವು ಪ್ರೀತಿಯಿಂದಲೇ ಮಾಡಬೇಕಾಗಿದೆ ಎಂದರು.
ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಪ್ರತಿಪಕ್ಷಗಳು ಒಂದಾಗಿದ್ದರೆ ಬಿಜೆಪಿಯನ್ನು ಸೋಲಿಸಬಹುದಿತ್ತು. ಇದಕ್ಕೆ ಇತ್ತೀಚಿನ ರಾಜಸ್ಥಾನ, ಮಧ್ಯ ಪ್ರದೇಶ ಮತ್ತು ಛತ್ತೀಸ್ ಗಢ ಚುನಾವಣೆಯೇ ಸಾಕ್ಷಿ. ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯುವುದು ಅಸಾಧ್ಯವೇನಲ್ಲ ಎಂದರು.
ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಜನರ ಮೇಲಿನ ಹಿಡಿತ ಕಳೆದುಕೊಳ್ಳುತ್ತಿದ್ದು, ಅವರು ಅಧಿಕಾರಕ್ಕಾಗಿ ಏನೂ ಬೇಕಾದರು ಮಾಡಲು ಸಿದ್ಧರಿದ್ದಾರೆ ಎಂದು ಆರೋಪಿಸಿದರು.
ಇದೇ ವೇಳೆ ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಶೌರಿ, ಈ ಹಿಂದೆ ಯಾವುದೇ ಸರ್ಕಾರವೂ ಇಷ್ಟೊಂದು ಸುಳ್ಳನ್ನು ಹೇಳಿರಲಿಲ್ಲ ಎಂದರು.
ಕರ್ನಾಟಕದ ರಾಜಕೀಯದ ಪರಿಸ್ಥಿತಿಯನ್ನು ಉಲ್ಲೇಖಿಸಿದ ಶೌರಿ, ಅಮಿತ್ ಶಾ ನೇತೃತ್ವದ ಬಿಜೆಪಿ ಶಾಸಕರ ಕುದುರೆ ವ್ಯಾಪಾರದಲ್ಲಿ ತೊಡಗಿದೆ. ಈಗ ಕರ್ನಾಟಕದಲ್ಲಿ ಮುಂದೆ ಮಧ್ಯ ಪ್ರದೇಶ ಹಾಗೂ ಇತರೆ ರಾಜ್ಯಗಳಲ್ಲೂ ಅದನ್ನು ಮುಂದುವರೆಸಬಹುದು. ಹೀಗಾಗಿ ನಾವು ಎಲ್ಲರೂ ಒಂದಾಗಬೇಕು ಮತ್ತು ಎಚ್ಚರದಿಂದ ಇರಬೇಕು ಎಂದರು.
SCROLL FOR NEXT