ದೇಶ

ಜಮ್ಮು-ಕಾಶ್ಮೀರದಲ್ಲಿ ಲೋಕಸಭೆ, ಆಸೆಂಬ್ಲಿ ಚುನಾವಣೆಗೆ ಸಿದ್ಧ- ಬಿಜೆಪಿ

Nagaraja AB

ಶ್ರೀನಗರ: ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಲೋಕಸಭೆ ಹಾಗೂ ಆಸೆಂಬ್ಲಿ ಚುನಾವಣೆಯನ್ನು ಎದುರಿಸಲು ಬಿಜೆಪಿ ಸಿದ್ಧವಿರುವುದಾಗಿ ಕೇಂದ್ರ ಸಚಿವ ಜೀತೇಂದ್ರ ಸಿಂಗ್ ಹೇಳಿದ್ದಾರೆ.

ರಾಂಬನ್ ಜಿಲ್ಲೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜೀತೇಂದ್ರ ಸಿಂಗ್, ಆಸೆಂಬ್ಲಿ ಹಾಗೂ ಲೋಕಸಭೆ ಚುನಾವಣೆ ಒಟ್ಟಿಗೆ ನಡೆದರೂ ಬಿಜೆಪಿ ಸಿದ್ದವಿದೆ ಎಂದರು.

ಚುನಾವಣಾ ಆಯೋಗ ಪರಿಶೀಲನೆ ನಂತರ  ಚುನಾವಣೆ ವೇಳಾಪಟ್ಟಿಯನ್ನು ಪ್ರಕಟಿಸಲಿದೆ. ಇಂದೇ ಚುನಾವಣೆ ನಡೆದರೂ ಬಿಜೆಪಿ ಸಿದ್ದವಿರುವುದಾಗಿ ಜೀತೇಂದ್ರ ಸಿಂಗ್ ಹೇಳಿದರು.

ಪ್ರಸ್ತುತ ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಲ್ಲಿದೆ. ಹಿಂದೆ ಆಡಳಿತ ನಡೆಸಿರುವ ಸರ್ಕಾರಗಳು ಕಣಿವೆ ಜಿಲ್ಲೆಯನ್ನು ನಿರ್ಲಕ್ಷಿಸಿವೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯದ ರಾಜ್ಯ ಸಚಿವರು ಆಗಿರುವ ಜೀತೇಂದ್ರ ಸಿಂಗ್ ಆರೋಪಿಸಿದ್ದು, ಜಮ್ಮು- ಕಾಶ್ಮೀರದ ಅಭಿವೃದ್ಧಿ ಕೇಂದ್ರಸರ್ಕಾರದ ಆದ್ಯತೆಯಾಗಿದೆ ಎಂದರು.

ಚೆನಾಬ್ ನದಿ ಮೇಲೆ ಸೇತುವೆ ಕಾಮಗಾರಿ ಅನುಮೋದನೆಗೊಂಡಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಆರಂಭಿಸಲಾಗುವುದು ಎಂದು ಜೀತೇಂದ್ರ ಸಿಂಗ್ ತಿಳಿಸಿದರು. 

SCROLL FOR NEXT