ದೇಶ

'ಇವಿಎಂ ಹ್ಯಾಕಿಂಗ್ ಸಾಧ್ಯ' ಎಂದ ಸೈಬರ್ ತಜ್ಞ ನಮ್ಮ ನೌಕರ ಅಲ್ಲ: ಇಸಿಐಎಲ್

Lingaraj Badiger
ನವದೆಹಲಿ: 2014ರ ಲೋಕಸಭೆ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರ(ಇವಿಎಂ) ದುರ್ಬಳಕೆಯಾಗಿತ್ತು ಮತ್ತು ಇವಿಎಂ ಹ್ಯಾಕ್‌ ಮಾಡಬಹುದು ಎಂದು ಹೇಳಿದ ಸ್ವಯಂ ಘೋಷಿತ ಸೈಬರ್ ತಜ್ಞ ಸೈಯದ್ ಸೂಜಾ ತಮ್ಮ ಸಂಸ್ಥೆಯ ನೌಕರ ಅಲ್ಲ ಎಂದು ಎಲೆಕ್ಟ್ರಾನಿಕ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್(ಇಸಿಐಎಲ್) ಮಂಗಳವಾರ ಸ್ಪಷ್ಟಪಡಿಸಿದೆ.
ಈ ಸಂಬಂಧ ಉಪ ಚುನಾವಣಾ ಆಯುಕ್ತ ಸುದೀಪ್ ಜೈನ್ ಅವರಿಗೆ ಪತ್ರ ಬರೆದಿರುವ ಇಸಿಐಎಲ್, ಸೈಯದ್​ ಸೂಜಾ ನಮ್ಮ ಕಂಪನಿಯ ನೌಕರ ಅಲ್ಲ ಮತ್ತು 2009ರಿಂದ 2014ರ ವರೆಗೆ ಇವಿಎಂ ಅಭಿವೃದ್ಧಿ ಹಾಗೂ ವಿನ್ಯಾಸದಲ್ಲಿ ಅವರ ಯಾವುದೇ ಪಾತ್ರ ಅಥವಾ ಸಹಕಾರ ಇಲ್ಲ ಎಂದು ಹೇಳಿದೆ.
ನಿನ್ನೆ ಲಂಡನ್ ನಲ್ಲಿ ಸ್ಕೈಪ್ ಮೂಲಕ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದ 
ಸೈಯದ್​ ಸೂಜಾ 2014ರ ಲೋಕಸಭೆ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರ(ಇವಿಎಂ) ದುರ್ಬಳಕೆಯಾಗಿತ್ತು ಮತ್ತು ಇವಿಎಂ ಹ್ಯಾಕ್‌ ಮಾಡಬಹುದು ಎಂದು ಹೇಳಿದ್ದರು. ಅಲ್ಲದೆ ಇವಿಎಂ ಅಭಿವೃದ್ಧಿಪಡಿಸಿದ ಇಸಿಐಎಲ್ ತಂಡದಲ್ಲಿ ನಾನೂ ಒಬ್ಬನಾಗಿದ್ದೆ ಎಂದು ಹೇಳಿಕೊಂಡಿದ್ದರು.
'ಇವಿಎಂ ಹ್ಯಾಕಿಂಗ್ ಸಾಧ್ಯ'  ಎಂದ ಸೈಯದ್ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ದೆಹಲಿ ಪೊಲೀಸರಿಗೆ ಪತ್ರ ಬರೆದಿರುವ ಚುನಾವಣಾ ಆಯೋಗ, ಆತಂಕ ಸೃಷ್ಟಿಸುವ ವದಂತಿಗಳನ್ನು ಹರಡಲು ಯತ್ನಿಸುವ ಮೂಲಕ ಐಪಿಸಿ ಸೆಕ್ಷನ್ 505(1) ಅನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದೆ.
SCROLL FOR NEXT