ದೇಶ

ಮೋದಿ ಚಹಾ ಮಾರಿಲ್ಲ, ಅದು ಅನುಕಂಪ ಗಿಟ್ಟಿಸಲು ಮಾಡಿದ ಗಿಮಿಕ್: ಪ್ರವೀಣ್ ತೊಗಾಡಿಯಾ

Lingaraj Badiger
ಆಗ್ರಾ: ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನನಗೆ 43 ವರ್ಷಗಳ ಸ್ನೇಹವಿತ್ತು. ನಾನು ಯಾವತ್ತೂ ಅವರು ಚಹಾ ಮಾರುವುದನ್ನು ನೋಡಿಲ್ಲ. ಅದು ಜನರ ಅನುಕಂಪ ಗಿಟ್ಟಿಸುವುದಕ್ಕಾಗಿ ಮಾಡಿದ ಗಿಮಿಕ್ ಅಷ್ಟೆ ಎಂದು ಅಂತರಾಷ್ಟ್ರೀಯ ಹಿಂದೂ ಪರಿಷತ್ ಮುಖ್ಯಸ್ಥ ಪ್ರವೀಣ್ ತೊಗಾಡಿಯಾ ಅವರು ಹೇಳಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.
ಬಿಜೆಪಿ ಮತ್ತು ಆರ್ ಎಸ್ಎಸ್ ಗೆ ರಾಮ ಮಂದಿರ ನಿರ್ಮಿಸುವ ಯಾವುದೇ ಉದ್ದೇಶ ಇಲ್ಲ. ಮೋದಿಯ ಹೇಳಿಕೆ ನಂತರ ಆರ್ ಎಸ್ಎಸ್ ಮುಖ್ಯಸ್ಥ ಭಯ್ಯಾಜಿ ಜೋಶಿ ಅವರು ಮುಂದಿನ ಐದು ವರ್ಷ ರಾಮ ಮಂದಿರ ನಿರ್ಮಿಸುವುದಿಲ್ಲ ಎಂದಿದ್ದಾರೆ. ಈ ಮೂಲಕ ಬಿಜೆಪಿ ಮತ್ತು ಆರ್ ಎಸ್ಎಸ್ 125 ಕೋಟಿ ಭಾರತೀಯರನ್ನು ಕತ್ತಲಲ್ಲಿ ಇರಿಸಿದೆ ಎಂದು ತೊಗಾಡಿಯಾ ಆರೋಪಿಸಿದ್ದಾರೆ.
ತ್ರಿವಳಿ ತಲಾಖ್ ನಿಷೇಧ ಕಾನೂನು ಜಾರಿಗೆ ತರಲು ಪ್ರಧಾನಿ ಮೋದಿ ಹಗಲು ರಾತ್ರಿ ಪ್ರಯತ್ನಿಸಿದರು. ಆದರೆ ರಾಮ ಮಂದಿರದ ಅಂತಹ ಯಾವುದೇ ಪ್ರಯತ್ನ ಮಾಡಲಿಲ್ಲ ಎಂದರು.
ಫೆಬ್ರವರಿ 9ರಂದು ನಾನು ಹೊಸ ರಾಜಕೀಯ ಪಕ್ಷ ಘೋಷಿಸುತ್ತಿದ್ದು, ಲೋಕಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ಮರುದಿನವೇ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ತೊಗಾಡಿಯಾ ಹೇಳಿದ್ದಾರೆ.
ಇದೇ ವೇಳೆ ಮೋದಿ ಎರಡನೇ ಬಾರಿ ಅಧಿಕಾರಕ್ಕೆ ಬಂದರೂ ರಾಮ ಮಂದಿರ ನಿರ್ಮಿಸುವುದಿಲ್ಲ ಎಂದು ಪ್ರವೀಣ್ ತೊಗಾಡಿಯಾ ಹೇಳಿದ್ದಾರೆ.
SCROLL FOR NEXT