ದೇಶ

'ಇವಿಎಂ ಹ್ಯಾಕಿಂಗ್ ಸಾಧ್ಯ' ಎಂದ ಸೈಬರ್ ತಜ್ಞ ಸೈಯದ್ ವಿರುದ್ಧ ಎಫ್ಐಆರ್ ದಾಖಲು

Lingaraj Badiger
ನವದೆಹಲಿ: 2014ರ ಲೋಕಸಭೆ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರ(ಇವಿಎಂ) ದುರ್ಬಳಕೆಯಾಗಿತ್ತು ಮತ್ತು ಇವಿಎಂ ಹ್ಯಾಕ್‌ ಮಾಡಬಹುದು ಎಂದು ಹೇಳಿದ್ದ ಸ್ವಯಂ ಘೋಷಿತ ಸೈಬರ್ ತಜ್ಞ ಸೈಯದ್ ಸೂಜಾ ವಿರುದ್ಧ ದೆಹಲಿ ಪೊಲೀಸರು ಬುಧವಾರ ಎಫ್ಐಆರ್ ದಾಖಲಿಸಿದ್ದಾರೆ. 
ಚುನಾವಣಾ ಆಯೋಗ ನೀಡಿದ ದೂರಿನ ಆಧಾರದ ಮೇಲೆ ಐಪಿಸಿ ಸೆಕ್ಷನ್ 505 ಅಡಿ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಿನ್ನೆಯಷ್ಟೆ ದೆಹಲಿ ಪೊಲೀಸರಿಗೆ ಪತ್ರ ಬರೆದಿದ್ದ ಕೇಂದ್ರ ಚುನಾವಣಾ ಆಯೋಗ, ಸೈಯದ್​ ಸೂಜಾ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ದೆಹಲಿ ಪೊಲೀಸರಿಗೆ ಸೂಚಿಸಿತ್ತು. 
 ಸೈಯದ್ ಸೂಜಾ ಅವರು ಆತಂಕ ಸೃಷ್ಟಿಸುವ ವದಂತಿಗಳನ್ನು ಹರಡಲು ಯತ್ನಿಸುವ ಮೂಲಕ ಐಪಿಸಿ ಸೆಕ್ಷನ್ 505(1) ಅನ್ನು ಉಲ್ಲಂಘಿಸಿದ್ದಾರೆ ಎಂದು ಆಯೋಗ ಆರೋಪಿಸಿದೆ.
ಕಳೆದ ಸೋಮವಾರ ಸೈಯದ್ ಸೂಜಾ 'ಭಾರತದಲ್ಲಿ ಬಳಕೆ ಮಾಡುವ ಇವಿಎಂಗಳನ್ನು ಸುಲಭವಾಗಿ ಹ್ಯಾಕ್​ ಮಾಡಬಹುದು' ಎಂದು ಹೇಳಿದ್ದು, ಇದೊಂದು ದುರುದ್ದೇಶ ಪೂರಿತವಾದ ಆರೋಪವಾಗಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಚುನಾವಣಾ ಆಯೋಗ ದೆಹಲಿ ಪೊಲೀಸರಿಗೆ ಕೇಳಿಕೊಂಡಿತ್ತು.
SCROLL FOR NEXT