ದೇಶ

ಲೋಕಸಭೆ ಚುನಾವಣೆ: ಮೋದಿ ಕೇರ್‌ ಫಲಾನುಭವಿಗಳಿಗೆ 7.5 ಕೋಟಿ ಪತ್ರ ಬರೆದ ಪ್ರಧಾನಿ

Lingaraj Badiger
ನವದೆಹಲಿ: ವಿಶ್ವದ ಅತಿ ದೊಡ್ಡ ಆರೋಗ್ಯ ವಿಮಾ ಯೋಜನೆ ಎನ್ನುವ ಹೆಗ್ಗಳಿಕೆ ಪಡೆದಿರುವ ಕೇಂದ್ರ ಸರ್ಕಾರದ 'ಆಯುಷ್ಮಾನ್‌ ಭಾರತ್‌' ಯೋಜನೆ ಜಾರಿಯಾಗಿ 100 ದಿನಗಳು ಕಳೆದಿದ್ದು, ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ 7.5 ಕೋಟಿ  ಫಲಾನುಭವಿಗಳಿಗೆ ನೇರವಾಗಿ ಪತ್ರ ಬರೆದು ವಿಮಾ ಯೋಜನೆ ಬಗ್ಗೆ ಮತ್ತು ತಮ್ಮ ಸರ್ಕಾರದ ಇತರೆ ಯೋಜನೆಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.
7.5 ಕೋಟಿ ಪತ್ರಗಳಿಗಾಗಿ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಬರೊಬ್ಬರಿ 15.75 ಕೋಟಿ ರುಪಾಯಿ ಖರ್ಚು ಮಾಡಿದ್ದು, ಎರಡು ಪುಟಗಳ ಪತ್ರವನ್ನು "ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆ" ಎಂದು ಬರೆದಿರು ಕವರ್ ನಲ್ಲಿಟ್ಟು ಪೋಸ್ಟ್ ಮಾಡಲಾಗಿದೆ.
ನಾನು ಸ್ವತಃ ಬಡತನವನ್ನು ಅನುಭವಿಸಿದ್ದೇನೆ. ಬಡವರನ್ನು ಮೇಲೇತ್ತುವ ಅತ್ಯುತ್ತಮ ಮಾರ್ಗವೆಂದರೆ ಅವರಿಗೆ ಅಧಿಕಾರ ನೀಡುವುದು. ಈ ಕಾರಣಕ್ಕಾಗಿಯೇ ಜನ ನನ್ನನ್ನು ಪ್ರಧಾನಿಯನ್ನಾಗಿ ಮಾಡಿದ್ದಾರೆ. ಈ ಮೂಲಕ ಬಡವರ ಸೇವೆ ಮಾಡುವ ಅವಕಾಶ ನೀಡಿದ್ದಾರೆ. ಬಡವರಿಗೆ, ಸಾಮಾನ್ಯ ಜನಕ್ಕೆ ಹಾಗೂ ಮಹಿಳೆಯರಿಗೆ ಅಧಿಕಾರ ನೀಡುವುದೇ ನನ್ನ ಉದ್ದೇಶ. ಆದಾಯ ಹೆಚ್ಚಿಸುವುದಕ್ಕಾಗಿ ನಾವು ಹಲವು ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದು ಪ್ರಧಾನಿ ಮೋದಿ ತಮ್ಮ ಪತ್ರದಲ್ಲಿ ಹೇಳಿದ್ದಾರೆ. ಅಲ್ಲದೆ ಪ್ರಧಾನಮಂತ್ರಿ ಆವಾಸ್ ಯೋಜನೆ, ಪ್ರಧಾನಮಂತ್ರಿ ಉಜ್ವಲ್ ಯೋಜನೆ, ಸೌಭಾಗ್ಯ ಯೋಜನೆ ಹಾಗೂ ಜ್ಯೋತಿ ಭೀಮ ಯೋಜನೆಯ ಲಾಭಗಳ ಬಗ್ಗೆಯೂ ಪ್ರಧಾನಿ ಮೋದಿತಮ್ಮ ಪತ್ರದಲ್ಲಿ ಮಾಹಿತಿ ನೀಡಿದ್ದಾರೆ ಎಂದು ಎನ್ ಡಿಟಿವಿ ವರದಿ ಮಾಡಿದೆ.
ಪ್ರತಿ ಫಲಾನುಭವಿ ಕುಟುಂಬಕ್ಕೂ ಖುದ್ದು ಮಾಹಿತಿ ಒದಗಿಸುವುದಕ್ಕಾಗಿ ಪ್ರಧಾನಿ ಕಂಡುಕೊಂಡ ಪರಿಹಾರ ಇದು ಎನ್ನಲಾಗಿದ್ದು, 'ಮೋದಿ ಕೇರ್‌' ವ್ಯಾಪ್ತಿಗೆ ಬರುವ 7.5 ಕೋಟಿ ಕುಟುಂಬಗಳಿಗೆ ಪ್ರಧಾನಿ ಪತ್ರ ಬರೆದು ಮಾಹಿತಿ ನೀಡುತ್ತಿದ್ದಾರೆ
ಆಡಳಿತಾತ್ಮಕ ವೆಚ್ಚದಲ್ಲಿ ಈ ಪತ್ರಗಳನ್ನು ಮುದ್ರಿಸಲಾಗಿದ್ದು, ರೋಗಿಗಳಿಗೆ ಹಂಚಿಕೆಯಾದ ಬಜೆಟ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು 'ಆಯುಷ್ಮಾನ್‌ ಭಾರತ್‌ ಸಿಇಒ ಹಿಂದು ಭೂಷಣ್ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಇನ್ನು ಪ್ರತಿಪಕ್ಷಗಳು ಇದು ಲೋಕಸಭೆ ಚುನಾವಣೆಯ ಗಿಮಿಕ್ಕಿ ಎಂದು ಟೀಕಿಸಿದ್ದು, ಬಿಜೆಪಿ ಪ್ರಚಾರಕ್ಕಾಗಿ ತೆರಿಗೆದಾರರ ಹಣ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿವೆ.
SCROLL FOR NEXT