ದೇಶ

'2ಜಿ ಹಗರಣದ ಗ್ಯಾಂಗಿಗೆ ಹೊಸ ಜಿ ಸೇರ್ಪಡೆ'; ಪ್ರಿಯಾಂಕಾ ಗಾಂಧಿ ವಿರುದ್ಧ ಅಮಿತ್ ಶಾ ಟೀಕೆ

Sumana Upadhyaya

ಕೋಲ್ಕತ್ತಾ: ಕಾಂಗ್ರೆಸ್ ನ ಸಕ್ರಿಯ ರಾಜಕಾರಣಕ್ಕೆ ಪ್ರಿಯಾಂಕಾ ಗಾಂಧಿ ಸೇರ್ಪಡೆಯನ್ನು '2ಜಿ ಹಗರಣ ಗ್ಯಾಂಗಿಗೆ ಹೊಸ ಜಿ ಸೇರ್ಪಡೆ' ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಟೀಕಿಸಿದ್ದಾರೆ.

ಪಶ್ಚಿಮ ಬಂಗಾಳದ ಮೇದಿನೀಪುರ ಜಿಲ್ಲೆಯ ಪುರ್ಬಾದಲ್ಲಿ ಸಾರ್ವಜನಿಕ ರ್ಯಾಲಿಯಲ್ಲಿ ನಿನ್ನೆ ಮಾತನಾಡಿದ ಅವರು, ಪ್ರಿಯಾಂಕಾ ಗಾಂಧಿಯ ಹೆಸರಿನಲ್ಲಿ ಗಾಂಧಿಯ ಮೊದಲು ಇರುವ ಜಿ ಅಕ್ಷರವನ್ನು ಹಿಡಿದು ಮೂದಲಿಸಿದರು. ಯುಪಿಎ ಅಧಿಕಾರಾವಧಿಯಲ್ಲಿ 12 ಲಕ್ಷ ಕೋಟಿ ರೂಪಾಯಿಗಳ 2ಜಿ ಹಗರಣ ನಡೆದಿದೆ. ಅದಕ್ಕೆ ಇದೀಗ ಮತ್ತೊಂದು ಜಿ ಸೇರ್ಪಡೆಯಾಗಿದೆ. ಅವರ ಹೆಸರು ಪ್ರಿಯಾಂಕಾ ಗಾಂಧಿ. ಅವರು ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರ ಯಾವ ಮಟ್ಟದಲ್ಲಿ ಇರಬಹುದು ಎಂದು ಊಹಿಸಿ ಎಂದು ನೆರೆದಿದ್ದ ಜನಸಮೂಹಕ್ಕೆ ಹೇಳಿದರು.

ಭಾರತದ ಬೇರೆ ಭಾಗಗಳ ಜನತೆ ಪ್ರಧಾನಿ ಮೋದಿಯವರಿಗೆ ಮತ ಹಾಕಿ ಅವರನ್ನು ಅಧಿಕಾರಕ್ಕೆ ತಂದರೆ ಪಶ್ಚಿಮ ಬಂಗಾಳದಲ್ಲಿ ಹಳೆಯ ವೈಭವ ಮತ್ತೆ ಮರುಕಳಿಸಲಿದೆ ಎಂದರು.

ಬಂಗಾಳದ ಜನತೆ ಬದಲಾವಣೆ ಬಯಸುತ್ತಿದ್ದಾರೆ. ತೃಣಮೂಲ ಕಾಂಗ್ರೆಸ್ ನಿಂದ ಅದನ್ನು ತಡೆಯಲು ಸಾಧ್ಯವಿಲ್ಲ. ಮತದಾರರು ಚುನಾವಣೆಯಲ್ಲಿ ಉತ್ತರ ಅದಕ್ಕೆ ತಕ್ಕ ಉತ್ತರ ನೀಡುತ್ತಾರೆ ಎಂದರು.

ಮಮತಾ ಬ್ಯಾನರ್ಜಿಯವರ ಪೈಂಟಿಂಗ್ ಕೋಟ್ಯಂತರ ರೂಪಾಯಿಗೆ ಮಾರಾಟವಾಗುತ್ತವೆ. ಚಿಟ್ ಫಂಡ್ ಆರೋಪಿಗಳು ಅದನ್ನು ಖರೀದಿಸುತ್ತಾರೆ. ಟಿಎಂಸಿಗೆ ಸೇರಿದವರು ಮಾಫಿಯಾದಲ್ಲಿ ಭಾಗಿಯಾಗಿದ್ದಾರೆ, ಹಸುಗಳ ಕಳ್ಳಸಾಗಣೆ ಮಾಡುವವರು, ಬಾಂಗ್ಲಾದೇಶದಿಂದ ಬಂದ ಅಕ್ರಮ ವಲಸಿಗರು ಟಿಎಂಸಿಯ ವೋಟ್ ಬ್ಯಾಂಕ್ ಗಳಾಗಿವೆ. ಮಮತಾ ಬ್ಯಾನರ್ಜಿಯವರು ಅವರ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದರೆ ಜಾನುವಾರುಗಳ ಕಳ್ಳ ಸಾಗಣೆ, ಅಕ್ರಮ ವಲಸಿಗರ ಒಳನುಸುಳುವಿಕೆ ತಡೆಯುವುದಲ್ಲದೆ ಚಿಟ್ ಫಂಡ್ ಹಣವನ್ನು ಕೂಡ ಜನರಿಗೆ ಹಿಂತಿರುಗಿಸಲಿದೆ ಎಂದು ಅಮಿತ್ ಶಾ ಭರವಸೆ ನೀಡಿದರು.

SCROLL FOR NEXT